ಮುಂಬೈ : ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ತೀವ್ರಗೊಂಡಿರುವ ಯುದ್ಧವು ಭಾರತೀಯ ಷೇರು ಮಾರುಕಟ್ಟೆಯನ್ನು ಅಕ್ಷರಶಃ ನಡುಗಿಸಿವೆ. ಫೆ.28ರಿಂದ ಆರಂಭವಾದ ಈ ಸಂಘರ್ಷದ ಪರಿಣಾಮವಾಗಿ, ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರ ಸುಮಾರು 31 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಕೊಚ್ಚಿಹೋಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರ ಪಲಾಯನವು ಮಾರುಕಟ್ಟೆಯನ್ನು ಪಾತಾಳಕ್ಕೆ ತಳ್ಳಿದೆ.
ಇಂದು ಒಂದೇ ದಿನ 12 ಲಕ್ಷ ಕೋಟಿ ನಷ್ಟ
ವಾರದ ಆರಂಭದ ದಿನವಾದ ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭೀಕರ ರಕ್ತಪಾತವಾಗಿದೆ. ಇರಾನ್‌ನ ಪ್ರಮುಖ ತೈಲ ಡಿಪೋಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ದರ ಗಗನಕ್ಕೇರಿದೆ. ಪರಿಣಾಮ ಹೂಡಿಕೆದಾರರು ಷೇರುಗಳನ್ನು ಒಂದೇ ಸಮನೆ ಮಾರಾಟ ಮಾಡಲಾರಂಭಿಸಿದ್ದಾರೆ. ಹೀಗಾಗಿ ವಹಿವಾಟಿನ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಬರೋಬ್ಬರಿ 2,299 ಪಾಯಿಂಟ್ಸ್ (ಶೇ. 2.91) ಕುಸಿತ ಕಂಡು 76,619 ಮಟ್ಟಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 714 ಪಾಯಿಂಟ್ಸ್ (ಶೇ. 2.92) ಇಳಿಕೆಯಾಗಿ 23,736 ಕ್ಕೆ ಕುಸಿಯಿತು. ಸೋಮವಾರ ಒಂದೇ ದಿನ ಹೂಡಿಕೆದಾರರು ಬರೋಬ್ಬರಿ 12.78 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಾರುಕಟ್ಟೆ ಕಂಡ ಅತ್ಯಂತ ಕರಾಳ ದಿನಗಳಲ್ಲಿ ಇದೂ ಒಂದು ಎಂದು ವಿಶ್ಲೇಷಿಸಲಾಗುತ್ತಿದೆ.
ಗಗನಕ್ಕೇರಿದ ತೈಲ ಬೆಲೆ
ಈ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಕಚ್ಚಾ ತೈಲದ ಬೆಲೆಯಲ್ಲಿ ಕಂಡುಬಂದ ದಿಢೀರ್ ಏರಿಕೆ. ಇರಾನ್ ಮೇಲಿನ ದಾಳಿಯಿಂದಾಗಿ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್‌ಗೆ 114 ಡಾಲರ್ ಗಡಿ ದಾಟಿದೆ. ಭಾರತವು ತನ್ನ ತೈಲದ ಅಗತ್ಯತೆಯ ಶೇಕಡಾ 85 ರಷ್ಟನ್ನು ಆಮದು ಮಾಡಿಕೊಳ್ಳುವುದರಿಂದ, ಕಚ್ಚಾ ತೈಲದ ಬೆಲೆ ಏರಿಕೆಯು ದೇಶದ ಹಣದುಬ್ಬರ ಮತ್ತು ವಿತ್ತೀಯ ಕೊರತೆಯ ಮೇಲೆ ನೇರ ಪೆಟ್ಟು ನೀಡುತ್ತಿದೆ. ಇದು ಹೂಡಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿದೇಶಿ ಹೂಡಿಕೆದಾರರ ಪಲಾಯನ
ಜಾಗತಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FPI) ಭಾರತೀಯ ಮಾರುಕಟ್ಟೆಯಿಂದ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯುತ್ತಿದ್ದಾರೆ. ಕಳೆದ ನಾಲ್ಕು ವಹಿವಾಟಿನ ದಿನಗಳಲ್ಲಿ ಸುಮಾರು 21,000 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯ ದೈತ್ಯ ಕಂಪನಿಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳು ಶೇಕಡಾ 3 ರಿಂದ 5 ರಷ್ಟು ಕುಸಿತ ಕಂಡಿವೆ. ಇಂಧನ ದರ ಏರಿಕೆಯ ಭೀತಿಯಿಂದ ತೈಲ ಮಾರಾಟ ಕಂಪನಿಗಳು (BPCL, HPCL) ಮತ್ತು ವಿಮಾನಯಾನ ಸಂಸ್ಥೆಗಳ ಷೇರುಗಳು ಶೇಕಡಾ 7-8 ರಷ್ಟು ನೆಲಕಚ್ಚಿವೆ.
ರಕ್ಷಣಾ ವಲಯದ ಷೇರುಗಳಿಗೆ ಬೇಡಿಕೆ
ಇಡೀ ಮಾರುಕಟ್ಟೆ ಕುಸಿತದ ಹಾದಿಯಲ್ಲಿದ್ದರೂ, ರಕ್ಷಣಾ ವಲಯದ (Defence) ಷೇರುಗಳು ಮಾತ್ರ ಲಾಭ ಗಳಿಸಿರುವುದು ಗಮನಾರ್ಹ. ಜಾಗತಿಕ ಯುದ್ಧದ ಸನ್ನಿವೇಶದಿಂದಾಗಿ ಮಿಲಿಟರಿ ವೆಚ್ಚಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರಕ್ಷಣಾ ವಲಯದ ಷೇರುಗಳು ಶೇಕಡಾ 6 ರಷ್ಟು ಏರಿಕೆ ಕಂಡಿವೆ. ಆದರೆ, ಒಟ್ಟಾರೆ ಮಾರುಕಟ್ಟೆಯ ಪರಿಸ್ಥಿತಿ ಇನ್ನೂ ಅಸ್ಥಿರವಾಗಿದ್ದು, ಯುದ್ಧದ ತೀವ್ರತೆ ಕಡಿಮೆಯಾಗುವವರೆಗೆ ಹೂಡಿಕೆದಾರರು ಎಚ್ಚರಿಕೆಯಿಂದ ಇರುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಲೆಬನಾನ್ ಹಳ್ಳಿಗಳ ಮೇಲೆ ಇಸ್ರೇಲ್‌ನಿಂದ ‘ವೈಟ್ ಫಾಸ್ಫರಸ್’ ದಾಳಿ.. ಏನಿದು ನಿಷೇಧಿತ ಅಸ್ತ್ರ?



















