ನವದೆಹಲಿ : ಇರಾನ್-ಅಮೆರಿಕ ನಡುವಿನ ಯುದ್ಧವು ಭೀಕರ ರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಲು ಭಾರತದ ನೌಕಾ ನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ವರದಿಗಳು ಹೊರಬಂದಿದ್ದು, ಅದನ್ನು ಭಾರತ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ವರದಿ ಸಂಪೂರ್ಣ “ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು” ಎಂದು ಹೇಳಿದೆ.
ವಿವಾದದ ಕಿಡಿ ಹೊತ್ತಿಸಿದ ಹೇಳಿಕೆ
ಅಮೆರಿಕದ ಮಾಜಿ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಅವರು ನೀಡಿದ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ‘ಒನ್ ಅಮೆರಿಕಾ ನ್ಯೂಸ್ ನೆಟ್‌ವರ್ಕ್’ ಎಂಬ ವಾಹಿನಿಯೊಂದಿಗೆ ಮಾತನಾಡಿದ್ದ ಅವರು, “ನಮ್ಮ (ಅಮೆರಿಕದ) ಎಲ್ಲಾ ನೆಲೆಗಳು ಮತ್ತು ಬಂದರುಗಳು ಧ್ವಂಸಗೊಂಡಿವೆ. ಹೀಗಾಗಿ ಅಮೆರಿಕ ನೌಕಾಪಡೆಯು ಕಾರ್ಯಾಚರಣೆಗಾಗಿ ಅನಿವಾರ್ಯವಾಗಿ ಭಾರತ ಮತ್ತು ಭಾರತದ ಬಂದರುಗಳನ್ನು ಅವಲಂಬಿಸಿದೆ,” ಎಂದು ಪ್ರತಿಪಾದಿಸಿದ್ದಾರೆ ಈ ವಿಡಿಯೋ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭಾರತದ ಖಡಕ್ ಪ್ರತಿಕ್ರಿಯೆ
ಈ ಹೇಳಿಕೆಗಳನ್ನು ತಳ್ಳಿಹಾಕಿರುವ ವಿದೇಶಾಂಗ ಸಚಿವಾಲಯದ ‘ಫ್ಯಾಕ್ಟ್ ಚೆಕ್’ ವಿಭಾಗವು, ಮ್ಯಾಕ್‌ಗ್ರೆಗರ್ ಅವರ ಕಾಮೆಂಟ್‌ಗಳು ಕಪೋಲಕಲ್ಪಿತ ಎಂದು ಸ್ಪಷ್ಟಪಡಿಸಿದೆ. “ಇಂತಹ ಸುಳ್ಳು ಮತ್ತು ಆಧಾರರಹಿತ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಿ,” ಎಂದು ಸಚಿವಾಲಯವು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಭಾರತ ಈಗಾಗಲೇ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಎಲ್ಲಾ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳಬೇಕು ಮತ್ತು ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದೆ.
ಯುದ್ಧ ಉಲ್ಬಣಗೊಳ್ಳುತ್ತಿರುವಂತೆಯೇ ಈ ವಿವಾದ
ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಕಾರಣವಾದ ನಂತರ ಮಧ್ಯಪ್ರಾಚ್ಯದಲ್ಲಿ ಅಶಾಂತಿ ತಲೆದೋರಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಈ ಸಂಘರ್ಷದ ನಡುವೆ, ಭಾರತಕ್ಕೆ ಸೌಹಾರ್ದ ಭೇಟಿ ನೀಡಿ ಮರಳುತ್ತಿದ್ದ ಇರಾನ್‌ನ ‘ಐರಿಸ್ ದೇನಾ’ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ಮಂಗಳವಾರ ರಾತ್ರಿ ಟಾರ್ಪಿಡೊ ಮೂಲಕ ಮುಳುಗಿಸಿದ್ದು, 87 ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದ ಮಾಜಿ ಅಧಿಕಾರಿಯಿಂದ ಈ ಹೇಳಿಕೆ ಹೊರಬಿದ್ದಿರುವುದು, ಭಾರತಕ್ಕೆ ಭಾರೀ ಅಪಾಯದ ಮುನ್ಸೂಚನೆಯನ್ನು ನೀಡಿದೆ.
6ನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧದಲ್ಲಿ ಇದುವರೆಗೆ ಇರಾನ್‌ನಲ್ಲಿ 1,000 ಕ್ಕೂ ಹೆಚ್ಚು ಮಂದಿ ಮತ್ತು ಇಸ್ರೇಲ್‌ನಲ್ಲಿ ಸುಮಾರು ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವ ಈ ಹೊತ್ತಿನಲ್ಲಿ ಭಾರತವು ಯಾವುದೇ ಮಿಲಿಟರಿ ನೆರವು ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ತನ್ನ ತಟಸ್ಥ ನಿಲುವನ್ನು ಬಲವಾಗಿ ಪ್ರತಿಪಾದಿಸಿದೆ.
ಇದನ್ನೂ ಓದಿ : ಗದಗದಲ್ಲಿ ಭೀಕರ ಅಪಘಾತ..ಇಬ್ಬರು ಸಾವು, ಹಲವರಿಗೆ ಗಾಯ


















