ಬೆಂಗಳುರು | ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡಗೆ ಹೈಕೋರ್ಟ್ನಲ್ಲಿ ಹಿನ್ನಡೆ ಆಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ವಿಶೇಷ ಅನುಮತಿಗಳೊಂದಿಗೆ ಜೈಲಿಗೆ ಮನೆಯಿಂದಲೇ ಊಟ ತರಿಸಿಕೊಳ್ಳುತ್ತಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದರು. ಇದೀಗ ಆ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳ ಮನೆ ಊಟಕ್ಕೆ ಬ್ರೇಕ್ ಬಿದ್ದಿದೆ.
ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಈ ಕುರಿತು ವಿವರವಾದ ವಿಚಾರಣೆ ನಡೆದು, ವಾರಕ್ಕೊಮ್ಮೆ ಅಥವಾ ವೈದ್ಯಕೀಯ ಕಾರಣಗಳಿದ್ದರೆ ಮನೆ ಊಟ ತರಿಸಿಕೊಳ್ಳಬಹುದು ಎಂಬ ಆದೇಶ ಹೊರಬಿದ್ದಿತ್ತು. ಅದರಂತೆ ಪವಿತ್ರಾ ಗೌಡ, ನಾಗರಾಜ್ ಮತ್ತು ಲಕ್ಷ್ಮಣ್ ಅವರುಗಳು ಮನೆಯಿಂದ ಊಟ ತರಿಸಿಕೊಳ್ಳುತ್ತಿದ್ದರು.
ಈ ವಿಶೇಷ ಸೇವೆಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು 57ನೇ ಸಿಸಿಹೆಚ್ ಕೋರ್ಟ್ ನೀಡಿದ್ದ ಆದೇಶ ರದ್ದುಪಡಿಸಿದೆ. ಅಲ್ಲದೆ, ‘ಆರೋಪಿ ಕೇಳಿದ ಕೂಡಲೇ ಮನೆ ಊಟ ಕೊಡಲು ಅನುಮತಿ ನೀಡಲು ಆಗದು, ವೈದ್ಯಕೀಯ ಸಲಹೆ ಇದ್ದರೆ ಮಾತ್ರ ಮನೆ ಊಟಕ್ಕೆ ಅವಕಾಶ’ ಎಂದಿದೆ.
ಇದನ್ನೂ ಓದಿ : ಕೆನಡಾದಲ್ಲಿ ಕನ್ನಡಿಗನ ಗುಂಡಿಟ್ಟು ಹತ್ಯೆ ಕೇಸ್ | ಆರೋಪಿ ಪೋಟೋ ರಿಲೀಸ್



















