ನವದೆಹಲಿ : ಕಳೆದ ವರ್ಷ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಮಹತ್ವದ ಸುಳಿವೊಂದು ಸಿಕ್ಕಿದೆ. ದಾಳಿಕೋರರು ಬಳಸಿದ್ದ ‘ಗೋಪ್ರೋ’ (GoPro) ಕ್ಯಾಮೆರಾವನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು, ಅದರ ಮೂಲ ಚೀನಾದಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಕೋರಿ ಎನ್‌ಐಎ ಈಗ ಚೀನಾ ಸರ್ಕಾರದ ಮೊರೆ ಹೋಗಿದೆ.
ತನಿಖೆಗೆ ವೇಗ ನೀಡಿದ ‘C3501325471706’ ಸರಣಿ ಸಂಖ್ಯೆ
ಪಹಲ್ಗಾಮ್ ದಾಳಿಯ ಸ್ಥಳದಲ್ಲಿ ವಶಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಸಾಧನಗಳ ಪೈಕಿ ‘ಗೋಪ್ರೋ ಹೀರೋ 12 ಬ್ಲಾಕ್’ ಕ್ಯಾಮೆರಾ ಅತ್ಯಂತ ನಿರ್ಣಾಯಕ ಸಾಕ್ಷಿಯಾಗಿ ಹೊರಹೊಮ್ಮಿದೆ. ‘C3501325471706’ ಸರಣಿ ಸಂಖ್ಯೆಯ ಈ ಕ್ಯಾಮೆರಾವನ್ನು ಭಯೋತ್ಪಾದಕರು ದಾಳಿಗೂ ಮುನ್ನ ನಡೆಸುವ ‘ಪರಿಶೀಲನೆ’ ಉದ್ದೇಶಕ್ಕಾಗಿ ಬಳಸಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಈ ಕ್ಯಾಮೆರಾದ ಪೂರೈಕೆ ಸರಪಳಿ ಮತ್ತು ಅದನ್ನು ಅಂತಿಮವಾಗಿ ಖರೀದಿಸಿದವರ ವಿವರಗಳನ್ನು ನೀಡುವಂತೆ ಎನ್‌ಐಎ ವಿಶೇಷ ನ್ಯಾಯಾಲಯವು ಚೀನಾದ ನ್ಯಾಯಾಂಗ ಇಲಾಖೆಗೆ ಪತ್ರ ಬರೆದಿದೆ.
ನೆದರ್ಲೆಂಡ್ಸ್‌ನಿಂದ ಚೀನಾದವರೆಗೆ ಹಬ್ಬಿದ ಜಾಲ
ಕ್ಯಾಮೆರಾದ ತಯಾರಕ ಕಂಪನಿಯಾದ ನೆದರ್ಲೆಂಡ್ಸ್‌ನ ‘ಗೋಪ್ರೋ ಬಿ.ವಿ’ ನೀಡಿದ ಮಾಹಿತಿಯ ಪ್ರಕಾರ, ಈ ಸಾಧನವನ್ನು ಚೀನಾ ಮೂಲದ ‘ಎಇ ಗ್ರೂಪ್ ಇಂಟರ್ನ್ಯಾಷನಲ್ ಲಿಮಿಟೆಡ್’ ಎಂಬ ವಿತರಕ ಸಂಸ್ಥೆಗೆ ಪೂರೈಸಲಾಗಿತ್ತು. ಅಷ್ಟೇ ಅಲ್ಲದೆ, ಈ ಕ್ಯಾಮೆರಾ 2024ರ ಜನವರಿ 30ರಂದು ಚೀನಾದ ಡೊಂಗ್ಗುವಾನ್‌ನಲ್ಲಿ ಮೊದಲ ಬಾರಿಗೆ ಸಕ್ರಿಯಗೊಂಡಿತ್ತು ಎಂಬುದು ತಿಳಿದುಬಂದಿದೆ. ಆದರೆ, ಈ ಸಾಧನವನ್ನು ಯಾರು ಖರೀದಿಸಿದರು ಎಂಬ ಅಂತಿಮ ವಿವರಗಳು ತಮ್ಮಲ್ಲಿಲ್ಲ ಎಂದು ತಯಾರಕ ಕಂಪನಿ ತಿಳಿಸಿರುವುದರಿಂದ, ಚೀನಾದ ನೆರವು ಈಗ ಅನಿವಾರ್ಯವಾಗಿದೆ.
ಸೇಡಿನ ಕಿಚ್ಚು ಹಚ್ಚಿದ್ದ ಪಹಲ್ಗಾಮ್ ದಾಳಿ
ಕಳೆದ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಈ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದಿದ್ದ ಭಾರತ ಸರ್ಕಾರ, ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟು ಕಠಿಣ ರಾಜತಾಂತ್ರಿಕ ಕ್ರಮ ಕೈಗೊಂಡಿತ್ತು. ಇದಾದ ಒಂದು ತಿಂಗಳ ಬಳಿಕ ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು. ನಂತರ ಎರಡೂ ದೇಶಗಳ ನಡುವೆ ಭಾರೀ ಸಂಘರ್ಷ ನಡೆದಿತ್ತು. ಸದ್ಯ ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಜಾರಿಯಲ್ಲಿದ್ದರೂ, ತನಿಖಾ ಸಂಸ್ಥೆಗಳು ದಾಳಿಯ ಹಿಂದಿರುವ ಅಂತರಾಷ್ಟ್ರೀಯ ಪಿತೂರಿಯನ್ನು ಭೇದಿಸಲು ಮುಂದಾಗಿವೆ.
ಇದನ್ನೂ ಓದಿ : ಸೆಮಿಫೈನಲ್ ಪಂದ್ಯಕ್ಕೂ ಮುನ್ನ ವಾಂಖೆಡೆ ಪಿಚ್ ಪರಿಶೀಲಿಸಿದ ಗಂಭೀರ್.. ಸಿಟ್ಟಾಗಿದ್ದೇಕೆ?



















