ಉಡುಪಿ | ಪ್ರೀತಿ ವಿಚಾರದಲ್ಲಿ ರಾಜಿ ಪಂಚಾಯ್ತಿ ನಡೆಸಲು ತೆರಳಿದ್ದ ವೇಳೆ ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕನೋರ್ವ ಚೂರಿ ಇರಿದ ಘಟನೆ ಮಲ್ಪೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಾಹಿತಿಗಳ ಪ್ರಕಾರ, ಮಂಜು ಕೊಳ ಅವರು ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಪಲಿಮಾರು ಭಾಗದ ಜೋಡಿಯೊಂದರ ಪ್ರೀತಿಯ ವಿಚಾರದಲ್ಲಿ ರಾಜಿ ಪಂಚಾಯ್ತಿ ನಡೆಸಲು ಕರೆದಿದ್ದರು ಎನ್ನಲಾಗಿದೆ.

ಈ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಯುವಕನೋರ್ವ ಮಂಜು ಕೊಳ ಅವರಿಗೆ ಚೂರಿ ಇರಿದಿದ್ದಾನೆ. ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಮಂಜು ಕೊಳ ಅವರು ಕುಸಿದು ಬಿದ್ದಿದ್ದು, ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಘಟನೆ ವೈಯಕ್ತಿಕ ಕಾರಣಗಳಿಂದ ನಡೆದಿರುವುದಾಗಿದೆ. ಘಟನೆಗೆ ಯಾವುದೇ ಕೋಮು ಹಿನ್ನೆಲೆ ಇಲ್ಲ. ಆದ್ದರಿಂದ ಯಾರೂ ಸಹ ವದಂತಿಗಳನ್ನು ಹರಡಬಾರದು. ಗಾಯಗೊಂಡ ಮಂಜು ಕೊಳ ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ : ಉಚಿತ ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ.. ನಿರುದ್ಯೋಗಿ ಯುವಕ-ಯುವತಿಯರಿಗೆ ಸುವರ್ಣಾವಕಾಶ!



















