ಶಿವಮೊಗ್ಗ : ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಭದ್ರಾವತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಾಗೇಂದ್ರಪ್ಪ ಎ.ಕೆ. ಅವರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಮಧ್ಯವರ್ತಿ ಖಾಸಗಿ ವ್ಯಕ್ತಿ ಮಂಜುನಾಥ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ಹಲವು ಬಾರಿ ಬಿಇಒ ಹಾಗೂ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಕಛೇರಿಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದರು. ಕೆಲಸ ಮಾತ್ರ ಆಗಿರಲಿಲ್ಲ. ಇತ್ತೀಚೆಗೆ ಬಿಇಒ ಮತ್ತು ಮಧ್ಯವರ್ತಿ ಇಬ್ಬರೂ ಸೇರಿಕೊಂಡು ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮಾಡಿಕೊಡುವುದಕ್ಕೆ 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಲಿಂಗರಾಜು ಅವರು ಮಾ.2ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅದೇ ದಿನ ಸಂಜೆ 7 ಗಂಟೆ ವೇಳೆಗೆ ಭದ್ರಾವತಿ ಬಿಇಒ ಕಚೇರಿಯ ಕೊಠಡಿಯಲ್ಲಿ, ಲಿಂಗರಾಜು ಅವರಿಂದ 1 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ನಾಗೇಂದ್ರಪ್ಪ ಎ.ಕೆ. ಮತ್ತು ಮಧ್ಯವರ್ತಿ ಮಂಜುನಾಥನನ್ನು ವಶಕ್ಕೆ ಪಡೆದಿದ್ದಾರೆ. ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018)ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಲೋಕಾಯುಕ್ತ ಇಲಾಖೆಯ ಈ ಕ್ರಮವು ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ನ್ಯೂಯಾರ್ಕ್‌ನಲ್ಲಿ ಗುಂಡಿನ ದಾಳಿಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿ


















