ಬೆಂಗಳೂರು | ಕಾರ್ಯಕ್ರಮಗಳಲ್ಲಿ ನಟಿಯರ ವಿಡಿಯೋಗಳನ್ನು ಕೆಲ ಯೂಟ್ಯೂಬರ್ಸ್ ಅಸಭ್ಯ ಕೋನಗಳಿಂದ ಚಿತ್ರೀಕರಿಸುವ ವಿರುದ್ಧ ಸ್ಯಾಂಡಲ್‌ವುಡ್ ನಟಿ ಸಪ್ತಮಿ ಗೌಡ ಕಿಡಿ ಕಾರಿದ್ದಾರೆ. ಕಾಂತರ ಚೆಲುವೆಗೂ ಯೂಟ್ಯೂಬರ್ಸ್ ಹಾವಳಿ ತಟ್ಟಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಸಪ್ತಮಿ ಗೌಡ ಪೋಸ್ಟ್‌ನಲ್ಲಿ ಏನಿದೆ?
ನಟಿ ಸಪ್ತಮಿ ಗೌಡ, ತಮ್ಮ ಇನ್’ಸ್ಟಾಗ್ರಾಂನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪೋಸ್ಟ್ ಮಾಡಿದ್ದು, ಪೋಸ್ಟ್ ವಿವರ ಹೀಗಿದೆ.. “ಚಿತ್ರರಂಗದಲ್ಲಿರುವ ಮಹಿಳೆಯರಾಗಿ ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರಿಕರಿಸಿ, ನಮ್ಮ ಕಲೆಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ. ಇಂತಹ ವರ್ತನೆ ಕೆಲವರಿಂದ ನಡೆಯುತ್ತಿರುವುದಾದರೂ ಅದು ಅಸಭ್ಯ, ಅವಮಾನಕಾರಿ ಮತ್ತು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ ನಾವು ಇಲ್ಲಿ ನಮ್ಮ ಸಿನಿಮಾ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯ ಕೋನಗಳಿಂದ ಚಿತ್ರೀಕರಿಸುವುದು, ನಮ್ಮ ಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ. ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ . ಈ ಗಡಿರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರಿಯುತ್ತದೆ ಎಂದು ಸಪ್ತಮಿ ಗೌಡ ಪೋಸ್ಟ್ ಮಾಡಿದ್ದಾರೆ.

ಸದ್ಯ ನಟಿಯ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದೆ. ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ ಸದ್ಯ ಸಪ್ತಮಿ ಗೌಡ, ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸತೀಶ್ ನೀನಾಸಂ ನಾಯಕನಾಗಿ ನಟಿಸಿದ್ದಾರೆ. ಕಾಂತಾರ ಮತ್ತು ಯುವ ಸಿನಿಮಾ ಬಳಿಕ ಅಷ್ಟಾಗಿ ಕಾಣಿಸಿಕೊಳ್ಳದ ನಟಿ, ಇದೀಗ ಎರಡು ವರ್ಷದ ಬಳಿಕ ಅಶೋಕ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಚಿತ್ರದಲ್ಲೂ ಹಳ್ಳಿ ಹುಡುಗಿಯಾಗಿ ನಟಿಸಿದ್ದಾರೆ. ಇದರ ನಡುವೆ ನಟಿ ಚಿತ್ರರಂಗದಲ್ಲಿನ ಮಹಿಳೆಯರು ಅನುಭವಿಸುತ್ತಿರುವ ಗಂಭೀರ ಸಮಸ್ಯೆಯ ಬಗ್ಗೆ ಧೈರ್ಯದಿಂದ ಮಾತನಾಡಿದ್ದಾರೆ.
ಇದನ್ನೂ ಓದಿ : ರಶ್ಮಿಕಾ-ವಿಜಯ್ ಅದ್ದೂರಿ ‘ಸಂಗೀತ್’ ಸಂಭ್ರಮ.. ಕಣ್ಮನ ಸೆಳೆಯುವ ಫೋಟೋಸ್ ವೈರಲ್



















