ಕೋಲ್ಕತ್ತಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡಿಸ್ ವಿರುದ್ಧ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಜಯಗಳಿಸಿತು. ಈ ಜಯದೊಂದಿಗೆ ಭಾರತ ಫೆ.5 ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತ ಕೊನೆಯ 12 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದಾಗ ಟೀಂ ಇಂಡಿಯಾದ ಅಭಿಮಾನಿಗಳ ಒತ್ತಡ ಹೆಚ್ಚಾಗಿತ್ತು.ಈ ವೇಳೆ ಕ್ರೀಸಿಗೆ ಬಂದ ಶಿವಂ ದುಬೆ 4 ಎಸೆತಗಳಲ್ಲಿ 2 ಬೌಂಡರಿ ಹೊಡೆದು 8 ರನ್ ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ಕೊನೆಯ ಓವರ್‌ನಲ್ಲಿ ಭಾರತಕ್ಕೆ 7 ರನ್ ಬೇಕಿತ್ತು. ಸಂಜು ಸ್ಯಾಮ್ಸನ್ ಜೋಸೆಫ್ ಅವರ ಮೊದಲ ಎಸೆತವನ್ನು ಸಿಕ್ಸ್‌ಗೆ ಅಟ್ಟಿದರೆ ಎರಡನೇ ಎಸೆತವನ್ನು ಬೌಂಡರಿಗೆ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.



















