ಕಾಸರಗೋಡು : ದಶಕಗಳ ಕಾಲ ವಿಷಕಾರಿ ಕೀಟನಾಶಕ ಎಂಡೋಸಲ್ಫಾನ್‌ನ ದುಷ್ಪರಿಣಾಮ ಎದುರಿಸುತ್ತಿರುವ ಕಾಸರಗೋಡಿನ ಸಂತ್ರಸ್ತರಿಗೆ ಕೊನೆಗೂ ನಿರಾಳತೆ ಒದಗಿದೆ. 2017ರಲ್ಲಿ ನಡೆದ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಗುರುತಿಸಲಾದ ಬಾಕಿ ಉಳಿದ 977 ಸಂತ್ರಸ್ತರಿಗೆ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲು ಕೇರಳ ಸರ್ಕಾರ ಅಂತಿಮವಾಗಿ 48.85 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಮೂಲಕ ಎಂಟು ವರ್ಷಗಳ ಸುದೀರ್ಘ ಕಾಯುವಿಕೆ ಈಗ ಅಂತ್ಯಗೊಂಡಂತಾಗಿದೆ.
8 ವರ್ಷ ಬಳಿಕ ಸುಪ್ರೀಂ ಆದೇಶಕ್ಕೆ ಮನ್ನಣೆ
ಎಂಡೋಸಲ್ಫಾನ್‌ನಿಂದ ಬಾಧಿತರಾದ ಪ್ರತಿ ವ್ಯಕ್ತಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ 2017ರ ಜನವರಿ 10ರಂದೇ ಐತಿಹಾಸಿಕ ತೀರ್ಪು ನೀಡಿತ್ತು. ಸಿಪಿಎಂನ ಯುವ ಘಟಕ ಡಿವೈಎಫ್‌ಐ (DYFI) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಈ ಆದೇಶ ನೀಡಿತ್ತು. ಆದರೆ, ಆ ಪಟ್ಟಿಯಲ್ಲಿದ್ದ ನೂರಾರು ಜನರಿಗೆ ತಾಂತ್ರಿಕ ಕಾರಣಗಳಿಂದಾಗಿ ಪರಿಹಾರ ತಲುಪಿರಲಿಲ್ಲ. ಈಗ ಸಾಮಾಜಿಕ ನ್ಯಾಯ ಇಲಾಖೆಯ ವಿಶೇಷ ಕಾರ್ಯದರ್ಶಿ ಡಾ. ಅಡೀಲಾ ಅಬ್ದುಲ್ಲಾ ಅವರು ಹೊರಡಿಸಿರುವ ಆದೇಶದಂತೆ, ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಈ ಹಣವನ್ನು ವಿತರಿಸಲು ಸೂಚನೆ ನೀಡಲಾಗಿದೆ.
2017ರ ವೈದ್ಯಕೀಯ ಶಿಬಿರದಲ್ಲಿ ಸುಮಾರು 1,905 ಜನರನ್ನು ಎಂಡೋಸಲ್ಫಾನ್ ಸಂತ್ರಸ್ತರೆಂದು ಶಂಕಿಸಿ ಪಟ್ಟಿ ಮಾಡಲಾಗಿತ್ತು. ಇವರಲ್ಲಿ ಹಲವರನ್ನು ಅರ್ಹತೆಯ ಆಧಾರದ ಮೇಲೆ ಕೈಬಿಡಲಾಗಿತ್ತು ಮತ್ತು ಈ ಹಿಂದೆ 54 ಜನರಿಗೆ ಮಾತ್ರ ತಲಾ 5 ಲಕ್ಷ ರೂಪಾಯಿ ನೀಡಲಾಗಿತ್ತು. ಈಗ ಬಾಕಿ ಉಳಿದಿದ್ದ 977 ಸಂತ್ರಸ್ತರಿಗೆ ‘ಕೇರಳ ಸಾಮಾಜಿಕ ಭದ್ರತಾ ಯೋಜನೆ’ಯ ಸಮಗ್ರ ಪ್ಯಾಕೇಜ್ ಅಡಿಯಲ್ಲಿ ಈ ಮೊತ್ತವನ್ನು ಒದಗಿಸಲಾಗುತ್ತಿದೆ. ಇದು ಸಂತ್ರಸ್ತರ ಕುಟುಂಬಗಳಿಗೆ ಚಿಕಿತ್ಸೆ ಮತ್ತು ಜೀವನೋಪಾಯಕ್ಕೆ ಆಸರೆಯಾಗಲಿದೆ.
ಚುನಾವಣೆ ಹೊಸ್ತಿಲಲ್ಲೇ ತೀರ್ಮಾನ
ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್‌ಡಿಎಫ್ (LDF) ಪರ ಪ್ರಚಾರದ ನೇತೃತ್ವ ವಹಿಸಲಿದ್ದು, ಮಾರ್ಚ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ದಶಕಗಳ ಹಳೆಯ ಮಾನವೀಯ ಸಮಸ್ಯೆಗೆ ಸ್ಪಂದಿಸಿರುವುದು ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ. ಕಾಸರಗೋಡಿನ 11 ಪಂಚಾಯತ್ ವ್ಯಾಪ್ತಿಯಲ್ಲಿ ಹರಡಿರುವ ಸಾವಿರಾರು ಸಂತ್ರಸ್ತ ಕುಟುಂಬಗಳು ಈ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿವೆ.
ಇದನ್ನೂ ಓದಿ : ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್!


















