ಬೆಳಗಾವಿ : ಖಾಸಗಿ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಕುಟುಂಬವೊಂದು ಬೀದಿಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಮನೆ ಸೀಜ್ ಮಾಡಲಾಗಿದ್ದು, ಮೂರು ತಿಂಗಳ ಹಸುಗೂಸು ಸೇರಿ ಐವರು ಕುಟುಂಬಸ್ಥರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ.
ಹನುಮಂತ ಪಾಟೀಲ್ ಎಂಬುವವರು ತಂದೆ ಶ್ರೀಕಾಂತ್ ಪಾಟೀಲ್ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು 20 ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ವರ್ಷ ಶ್ರೀಕಾಂತ್ ನಿಧನರಾದ ಬಳಿಕ, ಆರೋಗ್ಯ ಸಮಸ್ಯೆಯಿಂದಾಗಿ ಹನುಮಂತ ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಸುಮಾರು ಏಳು ಲಕ್ಷ ರೂ. ಬಾಕಿ ಇದ್ದ ಹಿನ್ನೆಲೆಯಲ್ಲಿ ಏಕಾಏಕಿ ಬಂದ ಪೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹನುಮಂತ ದಂಪತಿಗೆ ಮೂರು ತಿಂಗಳ ಹಸುಕೂಸಿದ್ದು, ಬಾಣಂತಿ-ಮಗು ಸೇರಿ ಒಟ್ಟೂ ಐವರು ಕುಟುಂಬಸ್ಥರು ರಾತ್ರಿಯಿಡೀ ಬೀದಿಯಲ್ಲಿ ಕಾಲ ಕಳೆದಿದ್ದಾರೆ. ಮನೆಯಲ್ಲಿ ಇನ್ನೋರ್ವ 5 ತಿಂಗಳ ಬಾಣಂತಿ-ಕೂಸು ಇದ್ದು, ರಾತ್ರಿ ಊಟವಿಲ್ಲದೆ, ಚಳಿಯಿಂದ ಬಳಲಿದ ಕಾರಣ ಮಗುವಿಗೆ ಹುಷಾರು ತಪ್ಪಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹನುಮಂತ ಪಾಟೀಲರ ಪತ್ನಿ ಶ್ರೀದೇವಿ ಅಳಲು ತೋಡಿಕೊಂಡಿದ್ದಾರೆ.
ಬಟ್ಟೆ, ಹಾಸಿಗೆ, ಪಾತ್ರೆ ಸೇರಿ ಮನೆಯೊಳಗಿನ ಯಾವ ವಸ್ತುವನ್ನೂ ತೆಗೆದುಕೊಳ್ಳಲು ಬಿಡದ ಸಿಬ್ಬಂದಿ, ಏಕಾಏಕಿ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಕೇವಲ ಹೆಂಗಸರು, ಮಕ್ಕಳು ಮಾತ್ರವಿದ್ದು, ಕೋರ್ಟ್ ನೋಟಿಸ್ ತೋರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ವರ್ಷದಿಂದ ಕಂತು ತುಂಬುತ್ತಾ ಬಂದಿದ್ದೇನೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿದ್ದ ಕಾರಣ ಹಣ ತುಂಬಿರಲಿಲ್ಲ ಎಂದು ಹನುಮಂತ ಟಿವಿ9ಗೆ ತಿಳಿಸಿದ್ದಾರೆ. ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕುಟುಂಬಕ್ಕೆ ಕಾಲಾವಕಾಶ ನೀಡುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದು ಎಂದ ಅಮೆರಿಕ



















