ಹೊಸದಿಲ್ಲಿ : ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಟೀಂ ಇಂಡಿಯಾದ ಭರವಸೆಯ ಆಟಗಾರ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಫಾರ್ಮ್ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಈ ಸ್ಫೋಟಕ ಬ್ಯಾಟರ್, ವಿಶ್ವಕಪ್‌ನ ಮೊದಲ ನಾಲ್ಕು ಪಂದ್ಯಗಳಲ್ಲಿ ಅಕ್ಷರಶಃ ಪರದಾಡಿದ್ದಾರೆ. ಮೂರು ಬಾರಿ ಶೂನ್ಯಕ್ಕೆ (Duck) ಔಟ್ ಆಗಿರುವ ಅವರು, ಈವರೆಗೆ ಗಳಿಸಿರುವುದು ಕೇವಲ 15 ರನ್ ಮಾತ್ರ. ಈ ಕಠಿಣ ಸಮಯದಲ್ಲಿ ದಕ್ಷಿಣ ಆಫ್ರಿಕಾದ ದಂತಕಥೆ ಫಾಫ್ ಡು ಪ್ಲೆಸಿಸ್, ಅಭಿಷೇಕ್ ಅವರ ಬ್ಯಾಟಿಂಗ್‌ನಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿ ಅಮೂಲ್ಯ ಸಲಹೆ ನೀಡಿದ್ದಾರೆ.
ಬೌಲರ್‌ಗಳ ‘ಚತುರ ಬಲೆ’ಗೆ ಸಿಲುಕಿದ ಅಭಿಷೇಕ್?
ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ವಿಶ್ಲೇಷಕರು ಮತ್ತು ಎದುರಾಳಿ ತಂಡಗಳು ಆಟಗಾರರ ಪ್ರತಿ ದೌರ್ಬಲ್ಯವನ್ನು ಹದ್ದಿನ ಕಣ್ಣಿನಿಂದ ಗಮನಿಸುತ್ತಿರುತ್ತವೆ ಎಂದು ಡು ಪ್ಲೆಸಿಸ್ ಹೇಳಿದ್ದಾರೆ. “ಅಭಿಷೇಕ್ ಶರ್ಮಾ ಅವರು ಆಫ್-ಸೈಡ್‌ನಲ್ಲಿ ಚೆಂಡನ್ನು ಅದ್ಭುತವಾಗಿ ಹೊಡೆಯುತ್ತಾರೆ ಎಂಬುದು ಬೌಲರ್‌ಗಳಿಗೆ ಈಗ ಚೆನ್ನಾಗಿ ತಿಳಿದಿದೆ. ಆದ್ದರಿಂದಲೇ ಅವರು ಈಗ ಡೀಪ್ ಪಾಯಿಂಟ್ ಮತ್ತು ಡೀಪ್ ಎಕ್ಸ್‌ಟ್ರಾ ಕವರ್‌ನಲ್ಲಿ ಫೀಲ್ಡರ್‌ಗಳನ್ನು ನಿಲ್ಲಿಸಿ ಆಮಿಷ ಒಡ್ಡುತ್ತಿದ್ದಾರೆ. ಅಭಿಷೇಕ್ ತಮ್ಮ ನೆಚ್ಚಿನ ಶಾಟ್ ಹೊಡೆಯಲು ಹೋಗಿ ಅಲ್ಲಿಯೇ ಕ್ಯಾಚ್ ನೀಡುತ್ತಿದ್ದಾರೆ” ಎಂದು ಫಾಫ್ ವಿವರಿಸಿದ್ದಾರೆ.
ಸ್ಲೋ ಬಾಲ್‌ಗಳ ಸವಾಲು ಮತ್ತು ಬ್ಯಾಟಿಂಗ್ ತಂತ್ರ
ಅಭಿಷೇಕ್ ಶರ್ಮಾ ಅವರ ‘ಲಾಂಗ್ ಬ್ಯಾಟ್ ಸ್ವಿಂಗ್’ (ಬ್ಯಾಟ್ ಬೀಸುವ ಶೈಲಿ) ಅವರ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಇದನ್ನು ಬೌಲರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ಬೌಲರ್‌ಗಳು ಸತತವಾಗಿ ಸ್ಲೋ ಬಾಲ್‌ಗಳನ್ನು ಎಸೆಯುವ ಮೂಲಕ ಅಭಿಷೇಕ್ ಅವರ ಟೈಮಿಂಗ್ ಕೆಡಿಸುತ್ತಿದ್ದಾರೆ. “ಬೌಲರ್‌ಗಳು ವೇಗ ಕಡಿಮೆ ಮಾಡಿದಾಗ, ಬ್ಯಾಟರ್ ಒಂದೋ ಕ್ರೀಸ್‌ನಿಂದ ಮುಂದೆ ಬಂದು ಚೆಂಡನ್ನು ಅಟ್ಯಾಕ್ ಮಾಡಬೇಕು ಅಥವಾ ಕ್ರೀಸ್‌ನಲ್ಲೇ ಹಿಂದೆ ಸರಿದು ಚೆಂಡು ಬರುವವರೆಗೆ ಕಾಯಬೇಕು. ಆವೇಶದಿಂದ ಮೊದಲೇ ಬ್ಯಾಟ್ ಬೀಸಬಾರದು” ಎಂದು ಡು ಪ್ಲೆಸಿಸ್ ಕಿವಿಮಾತು ಹೇಳಿದ್ದಾರೆ.
ಗವಾಸ್ಕರ್ ಮತ್ತು ರವಿಶಾಸ್ತ್ರಿ ಅವರ ಕಿವಿಮಾತು
ಕೇವಲ ಡು ಪ್ಲೆಸಿಸ್ ಮಾತ್ರವಲ್ಲದೆ, ಭಾರತದ ದಿಗ್ಗಜ ಸುನೀಲ್ ಗವಾಸ್ಕರ್ ಕೂಡ ಅಭಿಷೇಕ್ ಆಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪವರ್‌ಪ್ಲೇನಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಬೇಕೆಂಬ ಹಠ ಬಿಡಬೇಕು. ಮೊದಲು ಒಂದೆರಡು ಸಿಂಗಲ್ಸ್ ಪಡೆದು ಖಾತೆ ತೆರೆಯಬೇಕು. ನಂತರ ನಿಮ್ಮ ನೈಸರ್ಗಿಕ ಆಟ ಆಡಿ” ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ. ಇನ್ನು ರವಿಶಾಸ್ತ್ರಿ ಅವರು, “ಅಭಿಷೇಕ್ ಅತಿಯಾಗಿ ಯೋಚಿಸದೆ ಶಾಂತವಾಗಿರಬೇಕು. ಅವರಿಂದ ಒಂದು ದೊಡ್ಡ ಇನ್ನಿಂಗ್ಸ್ ಶೀಘ್ರದಲ್ಲೇ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಪೌಂಡ್ ಏರಿ ಬಂದು ಕಾರ್ ವಾಷಿಂಗ್ ಯಂತ್ರ ಕದ್ದೊಯ್ದ ಕಳ್ಳ



















