ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಪ್ರತಿಷ್ಠಿತ ‘ದಿ ಹಂಡ್ರೆಡ್’ (The Hundred) ಕ್ರಿಕೆಟ್ ಟೂರ್ನಿಯ ಮುಂಬರುವ ಆವೃತ್ತಿಗೂ ಮುನ್ನವೇ ಭಾರಿ ವಿವಾದವೊಂದು ಭುಗಿಲೆದ್ದಿದೆ. ಈ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆತಂಕದ ನಡುವೆಯೇ, ಟೂರ್ನಿಯ ಫ್ರಾಂಚೈಸಿ ಮಾಲೀಕತ್ವ ಹೊಂದಿರುವ ಭಾರತೀಯ ಉದ್ಯಮಿಗಳಿಗೆ ಇಸಿಬಿ ಈಗ ಗಂಭೀರ ಎಚ್ಚರಿಕೆ ನೀಡಿದೆ.
ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕತ್ವದ ಕಾವ್ಯಾ ಮಾರನ್ ಸೇರಿದಂತೆ ಐಪಿಎಲ್ ಮೂಲದ ಹೂಡಿಕೆದಾರರಿಗೆ ಬೋರ್ಡ್ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.
ಇಸಿಬಿ ಮಧ್ಯಪ್ರವೇಶ
‘ದಿ ಹಂಡ್ರೆಡ್’ ಟೂರ್ನಿಯ ಮುಂಬರುವ ಆಕ್ಷನ್‌ಗಾಗಿ ಸುಮಾರು 60ಕ್ಕೂ ಹೆಚ್ಚು ಪಾಕಿಸ್ತಾನಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಈ ಲೀಗ್‌ನ ಎಂಟು ತಂಡಗಳ ಪೈಕಿ ನಾಲ್ಕು ತಂಡಗಳಲ್ಲಿ ಭಾರತೀಯ ಮೂಲದ ಹೂಡಿಕೆದಾರರು ದೊಡ್ಡ ಮಟ್ಟದ ಪಾಲು ಹೊಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣದಿಂದಾಗಿ, ಐಪಿಎಲ್ ಮಾಲೀಕತ್ವದ ಈ ತಂಡಗಳು ಪಾಕಿಸ್ತಾನಿ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲು ಆಸಕ್ತಿ ತೋರುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈ ‘ತಾರತಮ್ಯ’ದ ವದಂತಿಗಳು ಇಂಗ್ಲೆಂಡ್ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಇಸಿಬಿ ಕಾರ್ಯಪ್ರವೃತ್ತವಾಗಿದೆ.
ತಾರತಮ್ಯ ನೀತಿಯ ವಿರುದ್ಧ ಕಠಿಣ ಕಾನೂನು
ಬ್ರಿಟಿಷ್ ಸುದ್ದಿ ಸಂಸ್ಥೆ ಬಿಬಿಸಿ ವರದಿಯ ಪ್ರಕಾರ, ಇಸಿಬಿಯು ಎಲ್ಲಾ ಎಂಟು ಫ್ರಾಂಚೈಸಿಗಳಿಗೆ ತನ್ನ ತಾರತಮ್ಯ ವಿರೋಧಿ ನೀತಿಗಳನ್ನು ನೆನಪಿಸಿದೆ. “ಯಾವುದೇ ರಾಷ್ಟ್ರದ ಆಟಗಾರನಿಗೆ ಸಮಾನ ಅವಕಾಶ ಸಿಗಬೇಕು. ಕೇವಲ ರಾಷ್ಟ್ರೀಯತೆಯ ಆಧಾರದ ಮೇಲೆ ಆಟಗಾರರನ್ನು ಹರಾಜಿನಿಂದ ಹೊರಗಿಡುವುದು ನಿಯಮಬಾಹಿರ” ಎಂದು ಮಂಡಳಿ ಸ್ಪಷ್ಟಪಡಿಸಿದೆ. ಒಂದು ವೇಳೆ ಯಾವುದೇ ತಂಡವು ಉದ್ದೇಶಪೂರ್ವಕವಾಗಿ ತಾರತಮ್ಯ ಎಸಗುತ್ತಿರುವುದು ಸಾಬೀತಾದರೆ, ಅಂತಹ ತಂಡಗಳ ವಿರುದ್ಧ ತನಿಖೆ ನಡೆಸಲು ಇಸಿಬಿಗೆ ಅಧಿಕಾರವಿದೆ. ಇಸಿಬಿ ಸಿಇಒ ರಿಚರ್ಡ್ ಗೌಲ್ಡ್ ಅವರು ಕಳೆದ ವರ್ಷವೇ ಈ ಬಗ್ಗೆ ಎಚ್ಚರಿಸಿದ್ದು, “ಎಲ್ಲಾ ದೇಶಗಳ ಆಟಗಾರರು ಎಲ್ಲಾ ತಂಡಗಳಲ್ಲಿ ಆಯ್ಕೆಯಾಗುವುದನ್ನು ನಾವು ನಿರೀಕ್ಷಿಸುತ್ತೇವೆ” ಎಂದಿದ್ದರು.
ಬ್ರಿಟಿಷ್ ಕ್ರಿಕೆಟ್ ಮೇಲೆ ಐಪಿಎಲ್ ಪ್ರಭಾವ
2008ರ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದ ನಿಷೇಧಿಸಲಾಗಿದೆ. ಈಗ ಅದೇ ಐಪಿಎಲ್ ಮಾಲೀಕರು ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಹೂಡಿಕೆ ಮಾಡಿರುವುದು ಈ ಸಂಘರ್ಷಕ್ಕೆ ಕಾರಣವಾಗಿದೆ.
ಕಾವ್ಯಾ ಮಾರನ್ ಅವರ ಸನ್ ಗ್ರೂಪ್ ‘ನಾರ್ದರ್ನ್ ಸೂಪರ್‌ಚಾರ್ಜರ್ಸ್’ ತಂಡವನ್ನು ಖರೀದಿಸಿದ್ದು, ಅದನ್ನು ‘ಸನ್‌ರೈಸರ್ಸ್ ಲೀಡ್ಸ್’ ಎಂದು ಮರುನಾಮಕರಣ ಮಾಡಿದೆ. ಲಕ್ನೋ ಸೂಪರ್ ಜೈಂಟ್ಸ್‌ನ ಆರ್‌ಪಿಎಸ್‌ಜಿ ಗ್ರೂಪ್ ‘ಮ್ಯಾಂಚೆಸ್ಟರ್ ಒರಿಜಿನಲ್ಸ್’ ತಂಡದಲ್ಲಿ ಶೇ. 70ರಷ್ಟು ಪಾಲು ಹೊಂದಿದೆ. ಮುಂಬೈ ಇಂಡಿಯನ್ಸ್ ಮಾಲೀಕತ್ವದ ರಿಲಯನ್ಸ್ ಸಂಸ್ಥೆಯು ‘ಓವಲ್ ಇನ್ವಿನ್ಸಿಬಲ್ಸ್’ ತಂಡದಲ್ಲಿ ಹೂಡಿಕೆ ಮಾಡಿದ್ದು, ಅದನ್ನು ‘ಎಂಐ ಲಂಡನ್’ ಎಂದು ಕರೆಯಲಾಗುತ್ತಿದೆ. ಹೀಗೆ ಐಪಿಎಲ್ ಪ್ರಭಾವ ಇಂಗ್ಲೆಂಡ್ ಕ್ರಿಕೆಟ್ ಮೇಲೆ ಹೆಚ್ಚಾಗಿರುವುದು ಪಾಕ್ ಆಟಗಾರರ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.
ಮೈಕೆಲ್ ವಾನ್ ಮತ್ತು ಅಂತರರಾಷ್ಟ್ರೀಯ ಒತ್ತಡ
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಕೂಡ ಈ ವಿಚಾರವಾಗಿ ಇಸಿಬಿ ಮೇಲೆ ಒತ್ತಡ ಹೇರಿದ್ದಾರೆ. “ಇದು ಅಂತರ್ಗತ ಕ್ರೀಡೆಯಾಗಬೇಕಾದರೆ ಇಂತಹ ತಾರತಮ್ಯಕ್ಕೆ ಅವಕಾಶ ನೀಡಬಾರದು. ಇಸಿಬಿ ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಮೊಹಮ್ಮದ್ ಅಮಿರ್ ಮತ್ತು ಇಮಾದ್ ವಾಸಿಂ ಮಾತ್ರ ಈ ಲೀಗ್‌ನಲ್ಲಿ ಆಡಿದ್ದರು. ಆದರೆ ಈ ಬಾರಿ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಸ್ಟಾರ್ ಆಟಗಾರರು ಹರಾಜಿನಲ್ಲಿದ್ದು, ಅವರನ್ನು ಭಾರತೀಯ ಮೂಲದ ಫ್ರಾಂಚೈಸಿಗಳು ಖರೀದಿಸುತ್ತವೆಯೇ ಅಥವಾ ಇಸಿಬಿ ನಿಯಮಗಳನ್ನು ಉಲ್ಲಂಘಿಸುತ್ತವೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ದೀಪ ಆರುವ ಮುನ್ನ ಜೋರಾಗಿ ಉರಿಯುತ್ತೆ.. ಹಾಗೆಯೇ ಬಿಜೆಪಿ | ಡಿಕೆಶಿ



















