ಬೆಂಗಳೂರು : ರಾಜಧಾನಿಯ ಗಲ್ಲಿ ಗಲ್ಲಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುತ್ತವೆ. ಆದರೆ ಇನ್ಮುಂದೆ ಬಿಎಂಟಿಸಿ ಬಸ್ಸುಗಳು ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸಂಚಾರ ಮಾಡಲು ಸಜ್ಜಾಗಿವೆ. ಇಲ್ಲಿಯವರೆಗೆ ಬಿಎಂಟಿಸಿ ಬಸ್ಸುಗಳು 40 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ಮಾಡುತ್ತಿದ್ದವು. ಇನ್ಮುಂದೆ ರಾಮನಗರ, ಕನಕಪುರ, ನೆಲಮಂಗಲ-ಹೊಸಕೋಟೆ, ದೇವನಹಳ್ಳಿ- ದೊಡ್ಡಬಳ್ಳಾಪುರಕ್ಕೂ ಸಂಚಾರ ಮಾಡಲಿವೆ.
ಬಿಎಂಟಿಸಿ ಹೊಸ ನಿರ್ಧಾರ ಪ್ರಯಾಣಿಕರಿಗೂ ಖುಷಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಪ್ರಯಾಣಿಕರು, ಗ್ರಾಮಾಂತರ ಭಾಗಗಳಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುವುದರಿಂದ ಶಾಲೆ-ಕಾಲೇಜು, ಕೆಲಸಕ್ಕೆ ಹೋಗುವವರಿಗೆ ತುಂಬಾ ಸಹಾಯ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ನಿಂದ ರಾಮನಗರಕ್ಕೆ, ಬನಶಂಕರಿ ಬಸ್ ಸ್ಟ್ಯಾಂಡ್ ನಿಂದ ಕನಕಪುರಕ್ಕೆ, ಮೆಜಸ್ಟಿಕ್ ಕೆಂಪೇಗೌಡ ಬಸ್ ಸ್ಟ್ಯಾಂಡ್ನಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.
ಬಿಎಂಟಿಸಿಯು 80 ಕಿಮೀ ವ್ಯಾಪ್ತಿಗೆ ಸೇವೆ ವಿಸ್ತರಣೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶಗಳು ಹಾಗೂ ನಗರ ಪ್ರದೇಶದ ಸಂಪರ್ಕ ಮತ್ತಷ್ಟು ಬಲವಾಗಲಿದೆ. ಉದ್ಯೋಗ, ಶಿಕ್ಷಣ ಹಾಗೂ ಚಿಕಿತ್ಸಾ ಅಗತ್ಯಗಳಿಗೆ ದಿನನಿತ್ಯ ನಗರಕ್ಕೆ ಬರುವ ಪ್ರಯಾಣಿಕರಿಗೆ ಇದು ಸಮಯ ಮತ್ತು ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ : ATS ಅಟ್ಯಾಕರ್ಸ್ ತಂಡ ಚೊಚ್ಚಲ ಆವೃತ್ತಿಯ ಸಿಎಂ ಕಪ್ ಚಾಂಪಿಯನ್



















