ಹುಬ್ಬಳ್ಳಿ : ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಬೆಳಗಾವಿ ಆಯ್ತು, ಇದೀಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ವಿಚಾರಣಾಧೀನ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಆರೋಪ ಕೇಳಿಬಂದಿದ್ದು, ಜೈಲಿನೊಳಗಿನ ಅಕ್ರಮ ಸೌಲಭ್ಯಗಳು ಹಾಗೂ ಕೈದಿಗಳ ಮೋಜು ಮಸ್ತಿ, ಗಾಂಜಾ, ಮದ್ಯ, ಮಾಂಸ ಸೇವನೆ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಣ ಕೊಟ್ಟರೆ ಸಬ್ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೊಲೆ ಆರೋಪಿಗಳು ಮೊಬೈಲ್ ಫೋನ್ ಬಳಸುತ್ತಿರುವುದು, ಸೆಲ್ಫಿ ತೆಗೆದುಕೊಳ್ಳುತ್ತಿರುವುದು, ಗಾಂಜಾ ಹಾಗೂ ಮದ್ಯ ಸೇವನೆ ಮಾಡುತ್ತಿರುವುದು ಕಾಣಿಸುತ್ತದೆ. ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿರುವಂತೆ ಕಂಡುಬರುವ ಈ ದೃಶ್ಯಗಳು, ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮೂರು ದಿನಗಳ ಹಿಂದಷ್ಟೇ ರಾಜ್ಯದ ಡಿಜಿಪಿ ಅಲೋಕ್ ಕುಮಾರ್ ಹುಬ್ಬಳ್ಳಿಯ ಉಪ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಜೈಲಿನ ಕಾರ್ಯವೈಖರಿ, ಭದ್ರತಾ ವ್ಯವಸ್ಥೆ, ಸಬ್ ಜೈಲ್ ಕಟ್ಟಡ, ಗಾರ್ಡನ್ ಹಾಗೂ ಕೈದಿಗಳಿಗೆ ಒದಗಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದರು. ಕೈದಿಗಳ ಜೊತೆಯೂ ಮಾತುಕತೆ ನಡೆಸಿದ್ದರು. ಆದರೆ ಅವರ ಭೇಟಿಯ ಮೂರೇ ದಿನಗಳಲ್ಲಿ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳ ವಿಡಿಯೋ ವೈರಲ್ ಆಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ಪತ್ನಿ ಇಶಾನಿ ಜೋಹರ್ ಜೊತೆಗಿನ ವಿಚ್ಛೇದನ ಖಚಿತಪಡಿಸಿದ ರಾಹುಲ್ ಚಹರ್



















