ಬೆಂಗಳೂರು | ಲೋಕಾಯುಕ್ತ ತನಿಖೆ ಹಾಗೂ ಚಾರ್ಜ್‌ಶೀಟ್ ಎದುರಿಸುತ್ತಿರುವ ಹೆಚ್.ಸಿ. ಸತ್ಯನ್ ಅವರಿಗೆ ‘ನಾಡೋಜ ಪ್ರಶಸ್ತಿ’ ಪ್ರದಾನ ಮಾಡುವ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಅವರಿಗೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ, ಸಂವಿಧಾನಬದ್ಧ-ಸಮಾನತೆ ತತ್ವ ಉತ್ತಮ ಆಡಳಿತ ತತ್ವಗಳು, ಸಂಸ್ಥೆಯ ಘನತೆ ಮತ್ತು ವಿಶ್ವಾಸಾರ್ಹತೆ, ನೈತಿಕ ಹಾಗೂ ಶೈಕ್ಷಣಿಕ ಮಾನದಂಡಗಳ ರಕ್ಷಣೆಯ ಹಿತದೃಷ್ಟಿಯಿಂದ ‘ನಾಡೋಜ ಪ್ರಶಸ್ತಿ’ ಪ್ರದಾನ ಮಾಡಬಾರದೆಂದು ದಿನೇಶ್ ಕಲ್ಲಹಳ್ಳಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಂಪಿ ವಿಶ್ವವಿದ್ಯಾಲಯವು ಲೋಕಾಯುಕ್ತ ತನಿಖೆ ಹಾಗೂ ಚಾರ್ಜ್ ಶೀಟ್ ಎದುರಿಸುತ್ತಿರುವ ಹೆಚ್.ಸಿ. ಸತ್ಯನ್ ಅವರಿಗೆ ‘ನಾಡೋಜ ಪ್ರಶಸ್ತಿ’ ಪ್ರದಾನ ಮಾಡುವ ಪ್ರಕ್ರಿಯೆಯನ್ನು ಕೈಗೊಂಡಿರುವುದು ಸೂಕ್ತವಾಗಿಲ್ಲ. ನಾಡೋಜ ಪ್ರಶಸ್ತಿ ವಿಶ್ವವಿದ್ಯಾಲಯದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಸಾರ್ವಜನಿಕ ಜೀವನದಲ್ಲಿ ಉನ್ನತ ನೈತಿಕತೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಮೌಲ್ಯಗಳನ್ನು ಪ್ರತಿಬಿಂಬಿಸುವ ವ್ಯಕ್ತಿಗಳಿಗೆ ಮಾತ್ರ ನೀಡಬೇಕಾದ ಸಮ್ಮಾನವಾಗಿದೆ. ಭ್ರಷ್ಟಾಚಾರ ಸಂಬಂಧಿತ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ಮತ್ತು ಚಾರ್ಜ್ ಶೀಟ್ ಪ್ರಕ್ರಿಯೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಇಂತಹ ಗೌರವ ಪ್ರದಾನ ಮಾಡುವುದು ಸಂಸ್ಥೆಯ ಘನತೆ, ನಂಬಿಕೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗುತ್ತದೆ. ಆದ್ದರಿಂದ ಪ್ರಶಸ್ತಿ ಪ್ರದಾನ ಮರುಪರಿಶೀಲನೆ ಅಗತ್ಯವಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ನೈತಿಕತೆ ಎಂಬುದು ಕಾನೂನುಬದ್ಧತೆಯಷ್ಟೇ ಮಹತ್ವದ್ದಾಗಿದೆ. Prevention of Corruption Act ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಪ್ರಕರಣವು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಗಂಭೀರ ಆರೋಪಗಳಿರುವ ವ್ಯಕ್ತಿಯನ್ನು ಸಮ್ಮಾನಿಸುವುದು “Public Policy”ಗೆ ವಿರುದ್ಧವಾಗುತ್ತದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಮಾದರಿಯನ್ನಾಗಿ ತೋರಿಸುವುದು ತಪ್ಪು ಸಂದೇಶ ನೀಡುತ್ತದೆ. ಇದು ಶಿಕ್ಷಣ ಕ್ಷೇತ್ರದ ನೈತಿಕ ನೆಲೆಗಟ್ಟಿಗೆ ಧಕ್ಕೆಯಾಗಿದೆ. ಹೀಗಾಗಿ ಅಂತಿಮ ನ್ಯಾಯಾಲಯದ ತೀರ್ಪು ಹೊರಬರುವವರೆಗೆ ಯಾವುದೇ ಗೌರವ ನೀಡಬಾರದು, ಪ್ರಶಸ್ತಿ ಪ್ರದಾನ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ದಿನೇಶ್ ಕಲ್ಲಹಳ್ಳಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : AI ಶೃಂಗದಲ್ಲಿ ಚೀನಾ ನಿರ್ಮಿತ ರೋಬೋ ಡಾಗ್ ಪ್ರದರ್ಶನ | ಗಲ್ಗೋಟಿಯಾಸ್ ವಿಶ್ವವಿದ್ಯಾಲಯಕ್ಕೆ ಗೇಟ್‌ಪಾಸ್!



















