ಭೋಪಾಲ್ (ಮಧ್ಯಪ್ರದೇಶ) : ಇನ್‌ಸ್ಟಾಗ್ರಾಮ್‌ನಲ್ಲಿ ಚಿಗುರಿದ ಪ್ರೇಮವೊಂದು ಭೀಕರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳನ್ನು ಆಕೆಯ ವಿವಾಹಿತ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ನೀರಿನ ಟ್ಯಾಂಕ್‌ಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳ ಆಟದಿಂದ ಬಯಲಾಯ್ತು ಹತ್ಯೆ ರಹಸ್ಯ
ಭೋಪಾಲ್‌ನ ನಿಶತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜನವಸತಿ ಪ್ರದೇಶದ ಬಳಿ ಇರುವ ಖಾಲಿ ನಿವೇಶನವೊಂದರಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಅಲ್ಲಿನ ನೀರಿನ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ಮಕ್ಕಳು, ಈ ಕುರಿತು ಸ್ಥಳೀಯರಿಗೆ ತಿಳಿಸಿದ್ದು, ಅನುಮಾನ ಬಂದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಟ್ಯಾಂಕ್‌ನಲ್ಲಿ ಕಬ್ಬಿಣದ ಪೆಟ್ಟಿಗೆಯೊಂದು ತೇಲುತ್ತಿರುವುದು ಕಂಡುಬಂದಿದೆ. ಅದನ್ನು ಹೊರತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.
ಪ್ರೇಮಕ್ಕೆ ತಿರುಗಿತ್ತು ಇನ್‌ಸ್ಟಾಗ್ರಾಮ್ ಪರಿಚಯ
ಮೃತ ಯುವತಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಸಿಯಾ ಮತ್ತು ಆರೋಪಿ ಸಮೀರ್ ನಡುವೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಈ ಸ್ನೇಹ ನಂತರ ಪ್ರೇಮಕ್ಕೆ ತಿರುಗಿತ್ತು. ಸುಮಾರು 3 ತಿಂಗಳ ಹಿಂದೆ ಸಿಯಾ ಮಹಾರಾಷ್ಟ್ರದಿಂದ ಭೋಪಾಲ್‌ಗೆ ಬಂದು ಸಮೀರ್ ಜೊತೆ ವಾಸಿಸಲು ಆರಂಭಿಸಿದ್ದಳು.
ವಿವಾಹಿತ ಪ್ರಿಯಕರನ ಕೌಟುಂಬಿಕ ಕಲಹ
ಆರೋಪಿ ಸಮೀರ್‌ಗೆ ಇದಕ್ಕೂ ಮೊದಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದರು. ಸಿಯಾ ಆತನ ಕಮಲಾ ನಗರದ ನಿವಾಸದಲ್ಲಿ ವಾಸಿಸಲು ಆರಂಭಿಸಿದ ನಂತರ ಮನೆಯಲ್ಲಿ ಅಶಾಂತಿ, ಗಲಾಟೆ ಶುರುವಾಗಿದೆ. ಸಮೀರ್‌ನ ಪತ್ನಿ ಮತ್ತು ಸಿಯಾ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ತನ್ನನ್ನು ಮದುವೆಯಾಗುವಂತೆ ಅಥವಾ ಹಣ ನೀಡುವಂತೆ ಸಮೀರ್‌ಗೆ ಸಿಯಾ ನಿರಂತರ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.
ಕಬ್ಬಿಣದ ಪೆಟ್ಟಿಗೆಯಲ್ಲಿ ಶವ ಸಾಗಾಟ
ಸೋಮವಾರ ಸಂಜೆ ಸಮೀರ್ ಮತ್ತು ಸಿಯಾ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದು ವಿಪರೀತಕ್ಕೆ ಹೋದಾಗ ಸಮೀರ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸಲು ತನ್ನ ತಾಯಿ, ಸಹೋದರ ಮತ್ತು ಸಹೋದರಿಯ ಸಹಾಯ ಪಡೆದು, ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಿ ಸೀಲ್ ಮಾಡಿ, ತಡರಾತ್ರಿ ಮನೆಯ ಸಮೀಪದ ಖಾಲಿ ನಿವೇಶನದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ. ಶವ ಕೊಳೆತು ದುರ್ವಾಸನೆ ಬರಲು ಆರಂಭಿಸಿದ ಬಳಿಕವೇ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಮುಖ್ಯ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದು, ಕೃತ್ಯಕ್ಕೆ ಸಹಕರಿಸಿದ ಆತನ ತಾಯಿ, ಸಹೋದರ ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ದಳಪತಿ ಅಭಿಮಾನಿಗಳಿಗೆ ಮತ್ತೆ ನಿರಾಸೆ | ಏ.30ಕ್ಕೂ ಮುನ್ನ ‘ಜನನಾಯಕನ್’ ದರ್ಶನ ಭಾಗ್ಯವಿಲ್ಲ!



















