ಕೊಲಂಬೊ : 2026ರ ಟಿ20 ವಿಶ್ವಕಪ್‌ನ ಅತ್ಯಂತ ರೋಚಕ ಹಂತಕ್ಕೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 15ರಂದು (ಭಾನುವಾರ) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಮೈದಾನದ ಹೊರಗಿನ ಎಲ್ಲಾ ರಾಜಕೀಯ ಮತ್ತು ವಿವಾದಗಳ ಹೊರತಾಗಿಯೂ, ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ವಿಶೇಷವೆಂದರೆ, ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ ಭಾರತ ತಂಡಕ್ಕೆ ಅತ್ಯಂತ ಅದೃಷ್ಟದ ಮೈದಾನವಾಗಿದೆ. ಇಲ್ಲಿ ಟೀಮ್ ಇಂಡಿಯಾ ಹೊಂದಿರುವ ದಾಖಲೆ ಪಾಕಿಸ್ತಾನದ ಪಾಳಯದಲ್ಲಿ ನಡುಕ ಹುಟ್ಟಿಸುವಂತಿದೆ.
ಪ್ರೇಮದಾಸದಲ್ಲಿ ಭಾರತದ ಪಾರುಪತ್ಯ
ಭಾರತ ತಂಡವು ಕೊಲಂಬೊದ ಈ ಐತಿಹಾಸಿಕ ಮೈದಾನದಲ್ಲಿ ಅಮೋಘ ದಾಖಲೆ ಹೊಂದಿದೆ. 2009ರಿಂದ ಇಲ್ಲಿಯವರೆಗೆ ಭಾರತ 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಬರೋಬ್ಬರಿ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ವಿಶೇಷವೆಂದರೆ, ಈ ಮೈದಾನದಲ್ಲಿ ಆತಿಥೇಯ ಶ್ರೀಲಂಕಾ ಹೊರತುಪಡಿಸಿದರೆ, ಭಾರತವನ್ನು ಸೋಲಿಸಲು ಸಾಧ್ಯವಾಗಿರುವುದು ಆಸ್ಟ್ರೇಲಿಯಾಕ್ಕೆ ಮಾತ್ರ. ಇದು ಇಲ್ಲಿನ ಪರಿಸ್ಥಿತಿಗೆ ಭಾರತದ ಆಟಗಾರರು ಎಷ್ಟು ಚೆನ್ನಾಗಿ ಹೊಂದಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ.
- ಆಡಿದ ಪಂದ್ಯಗಳು: 15
- ಗೆಲುವು: 11
- ಸೋಲು: 4
- ಅತ್ಯಧಿಕ ಸ್ಕೋರ್: 176/3 (ಬಾಂಗ್ಲಾದೇಶ ವಿರುದ್ಧ, ಮಾರ್ಚ್ 2018)
- ಕನಿಷ್ಠ ಸ್ಕೋರ್: 81/8 (ಶ್ರೀಲಂಕಾ ವಿರುದ್ಧ, ಜುಲೈ 2021)
- ಸರಾಸರಿ ಸ್ಕೋರ್: 157
ಗೆಲ್ಲಲು ಎಷ್ಟು ರನ್ ಬೇಕು?
ಇತಿಹಾಸವನ್ನು ನೋಡಿದರೆ, ಈ ಮೈದಾನದಲ್ಲಿ ಚೇಸಿಂಗ್ ಮಾಡುವ ತಂಡಗಳಿಗೆ ಹೆಚ್ಚು ಲಾಭವಾಗಿದೆ. 51 ಪಂದ್ಯಗಳಲ್ಲಿ 28 ಬಾರಿ ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಆದರೆ, ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಈ ಲೆಕ್ಕಾಚಾರ ತಲೆಕೆಳಗಾಗಿದೆ. ಇಲ್ಲಿ ನಡೆದ ಕಳೆದ ಮೂರೂ ಪಂದ್ಯಗಳಲ್ಲಿ (ಐರ್ಲೆಂಡ್ ವಿರುದ್ಧ ಎರಡು ಬಾರಿ, ಆಸ್ಟ್ರೇಲಿಯಾ ವಿರುದ್ಧ ಒಂದು ಬಾರಿ) ಚೇಸಿಂಗ್ ಮಾಡಿದ ತಂಡ ಸೋತಿದೆ. ಇಲ್ಲಿನ ಸರಾಸರಿ ಸ್ಕೋರ್ 152 ಆಗಿದ್ದರೂ, ಪ್ರಸ್ತುತ ಟೂರ್ನಿಯಲ್ಲಿ ಅದು 158ಕ್ಕೆ ಏರಿಕೆಯಾಗಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ 150ಕ್ಕೂ ಹೆಚ್ಚು ರನ್ ಗಳಿಸಿದಾಗಲೆಲ್ಲಾ (6 ಪಂದ್ಯಗಳಲ್ಲಿ 5 ಗೆಲುವು) ಮೇಲುಗೈ ಸಾಧಿಸಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ 165 ರನ್‌ಗಳ ಆಸುಪಾಸಿನ ಮೊತ್ತ ನಿರ್ಣಾಯಕವಾಗಬಹುದು.
ಸ್ಪಿನ್ನಾ? ವೇಗವಾ?
ಕೊಲಂಬೊ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುತ್ತದೆ ಎಂಬುದು ಜನಪ್ರಿಯ ನಂಬಿಕೆ. ಆದರೆ ಅಂಕಿಅಂಶಗಳ ಪ್ರಕಾರ ವೇಗಿಗಳು (323 ವಿಕೆಟ್) ಸ್ಪಿನ್ನರ್‌ಗಳಿಗಿಂತ (282 ವಿಕೆಟ್) ಸ್ವಲ್ಪ ಮುಂದಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಆಡಮ್ ಝಂಪಾ, ವನಿಂದು ಹಸರಂಗ ಅವರಂತಹ ಸ್ಪಿನ್ನರ್‌ಗಳು ಮಿಂಚಿದರೆ, ನಾಥನ್ ಎಲ್ಲಿಸ್, ಮಾರ್ಕ್ ಅಡೇರ್ ಅವರಂತಹ ವೇಗಿಗಳೂ ವಿಕೆಟ್ ಬೇಟೆಯಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಲ್ಲಿ ಗುಣಮಟ್ಟದ ಸ್ಪಿನ್ ದಾಳಿ ಇದೆ. ಆದರೆ ಜಸ್‌ಪ್ರೀತ್ ಬುಮ್ರಾ ಆಗಮನ ಭಾರತದ ವೇಗದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ಅದೇ ಸಮಯದಲ್ಲಿ, ಪಾಕಿಸ್ತಾನದ ‘ಮಿಸ್ಟರಿ ಸ್ಪಿನ್ನರ್’ ಉಸ್ಮಾನ್ ತಾರಿಕ್ ಅವರನ್ನು ಎದುರಿಸುವುದು ಭಾರತಕ್ಕೆ ಸವಾಲಾಗಬಹುದು. ಭಾನುವಾರದ ಪಂದ್ಯದಲ್ಲಿ ಕೇವಲ ಸ್ಪಿನ್ ಅಷ್ಟೇ ಅಲ್ಲ, ವೇಗಿಗಳೂ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿಗಳ ಸಾವಿಗೆ ಕಾರಣವಾಯ್ತಾ ‘ಸ್ಲೋ ಪಾಯಿಸನ್!?


















