ನವದೆಹಲಿ : ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ (ಫೆಬ್ರವರಿ 15) ಮುಖಾಮುಖಿಯಾಗಲಿವೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯವು ‘ಗ್ರೂಪ್ ಎ’ನಿಂದ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವ ತಂಡವನ್ನು ನಿರ್ಧರಿಸಲಿದೆ. ಈ ನಿರ್ಣಾಯಕ ಪಂದ್ಯಕ್ಕಾಗಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ (Playing XI) ಮೂರು ಪ್ರಮುಖ ಬದಲಾವಣೆಗಳು ಆಗುವ ಸಾಧ್ಯತೆ ದಟ್ಟವಾಗಿದೆ.
ಸ್ಪಿನ್ ಅಸ್ತ್ರಕ್ಕೆ ಮಣೆ: ಕುಲದೀಪ್, ಸುಂದರ್‌ಗೆ ಚಾನ್ಸ್?
ಕೊಲಂಬೊದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಹೆಚ್ಚುವರಿ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯುವ ತಂತ್ರ ರೂಪಿಸಿದೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯೂ ಮುಂಚೂಣಿಯಲ್ಲಿದೆ. ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಿದ್ದ ಸುಂದರ್, ಸ್ಪಿನ್ ಬೌಲಿಂಗ್ ಜೊತೆಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನೂ ತುಂಬಬಲ್ಲರು ಎಂಬುದು ತಂಡದ ಲೆಕ್ಕಾಚಾರವಾಗಿದೆ.
ಯಾರಿಗೆ ಕೊಕ್? ರಿಂಕು, ಅರ್ಶ್‌ದೀಪ್‌ಗೆ ವಿಶ್ರಾಂತಿ?
ತಂಡಕ್ಕೆ ಹೊಸಬರು ಬಂದರೆ ಹಳೆಯಬರಿಗೆ ಜಾಗ ಬಿಡಲೇಬೇಕಿದೆ. ಪ್ರಸ್ತುತ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿರುವ ಫಿನಿಶರ್ ರಿಂಕು ಸಿಂಗ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ, ಸ್ಪಿನ್‌ಗೆ ಹೆಚ್ಚು ಆದ್ಯತೆ ನೀಡುವುದರಿಂದ ವೇಗಿ ಅರ್ಶ್‌ದೀಪ್ ಸಿಂಗ್ ಅವರಿಗೂ ವಿಶ್ರಾಂತಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಾರೆಯಾಗಿ, ಕುಲದೀಪ್ ಮತ್ತು ಸುಂದರ್‌ಗೆ ದಾರಿ ಮಾಡಿಕೊಡಲು ರಿಂಕು ಮತ್ತು ಅರ್ಶ್‌ದೀಪ್ ಬೆಂಚ್ ಕಾಯಬೇಕಾಗಬಹುದು.
ಅಭಿಷೇಕ್ ಶರ್ಮಾ ಅಲಭ್ಯತೆ ಬಹುತೇಕ ಖಚಿತ
ಮತ್ತೊಂದೆಡೆ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಅವರೇ ಖುದ್ದು ಈ ಬಗ್ಗೆ ಮಾಹಿತಿ ನೀಡಿದ್ದು, “ಅಭಿಷೇಕ್ ಒಂದೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು,” ಎಂದು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ವಿರುದ್ಧ 189ರ ಸ್ಟ್ರೈಕ್ ರೇಟ್‌ನಲ್ಲಿ 110 ರನ್ ಸಿಡಿಸಿರುವ ಅಭಿಷೇಕ್ ಅವರ ಅನುಪಸ್ಥಿತಿ ಕಾಡಲಿದೆ.
ಇದನ್ನೂ ಓದಿ : ಮೋದಿ ಕುರಿತು ಟ್ರಂಪ್ ಹೇಳಿಕೆ | ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಭಾರತ



















