ನವದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ಫೋನ್‌ಗಳಿಗೆ ಯಾವಾಗಲೂ ವಿಶೇಷ ಬೇಡಿಕೆ ಇದ್ದೇ ಇರುತ್ತದೆ. ಈ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೇಶೀಯ ಮೊಬೈಲ್ ತಯಾರಕ ಕಂಪನಿ ಲಾವಾ (Lava), ತನ್ನ ‘ಯುವ’ ಸರಣಿಯಲ್ಲಿ ಹೊಸದೊಂದು ಸೇರ್ಪಡೆ ಮಾಡಿದೆ. ಹೌದು, ಲಾವಾ ಯುವ ಸ್ಟಾರ್ 3 (Lava Yuva Star 3) ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಕಡಿಮೆ ಬೆಲೆಗೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊತ್ತು ಬಂದಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಯುವ ಸ್ಟಾರ್ 2 ಮಾದರಿಯ ಉತ್ತರಾಧಿಕಾರಿಯಾಗಿ ಈ ಫೋನ್ ಬಂದಿದ್ದು, ವಿನ್ಯಾಸ ಮತ್ತು ಸಾಫ್ಟ್‌ವೇರ್ ವಿಭಾಗದಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ.
ವಿನ್ಯಾಸ ಮತ್ತು ಡಿಸ್‌ಪ್ಲೇ
ಯುವ ಸ್ಟಾರ್ 3 ಫೋನ್ ಮೊದಲ ನೋಟದಲ್ಲೇ ಸೆಳೆಯುವಂತಿದೆ. ಸಮತಟ್ಟಾದ ಫ್ರೇಮ್ (Flat Frame) ಮತ್ತು ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಫೋನ್‌ಗೆ ಪ್ರೀಮಿಯಂ ಲುಕ್ ನೀಡಿದೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳಿರುವಂತೆ ಕಂಡರೂ, ವಾಸ್ತವವಾಗಿ ಇದರಲ್ಲಿ ಒಂದೇ ಕ್ಯಾಮೆರಾ ಅಳವಡಿಸಲಾಗಿದೆ. ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ಇದೆ. 6.75 ಇಂಚಿನ ಎಚ್‌ಡಿ ಪ್ಲಸ್ ಎಲ್‌ಸಿಡಿ ಪರದೆಯು 90 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದ್ದು, ಬಳಕೆದಾರರಿಗೆ ಸ್ಮೂತ್ ಸ್ಕ್ರೋಲಿಂಗ್ ಅನುಭವ ನೀಡಲಿದೆ. ವಿಶೇಷವೆಂದರೆ, ಈ ಬಜೆಟ್ ಫೋನ್‌ಗೂ ಐಪಿ64 (IP64) ರೇಟಿಂಗ್ ನೀಡಲಾಗಿದ್ದು, ಇದು ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ಒದಗಿಸುತ್ತದೆ.
ಸಾಫ್ಟ್‌ವೇರ್ ಮತ್ತು ಕಾರ್ಯಕ್ಷಮತೆ
ಈ ಫೋನ್‌ನ ಪ್ರಮುಖ ಆಕರ್ಷಣೆ ಎಂದರೆ ಅದರ ಸಾಫ್ಟ್‌ವೇರ್. ಗೂಗಲ್‌ನ ಲೇಟೆಸ್ಟ್ ಆಪರೇಟಿಂಗ್ ಸಿಸ್ಟಮ್ ಆದ ‘ಆಂಡ್ರಾಯ್ಡ್ 15 ಗೋ ಎಡಿಷನ್’ (Android 15 Go Edition) ಇದರಲ್ಲಿ ಕಾರ್ಯನಿರ್ವಹಿಸುತ್ತದೆ. ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಗಾಗಿಯೇ ರೂಪಿಸಲಾದ ಈ ಹಗುರ ಆವೃತ್ತಿಯು ಫೋನ್ ಹ್ಯಾಂಗ್ ಆಗದಂತೆ ನೋಡಿಕೊಳ್ಳುತ್ತದೆ. ಲಾವಾ ಭರವಸೆ ನೀಡಿದಂತೆ, ಇದರಲ್ಲಿ ಯಾವುದೇ ಅನಗತ್ಯ ಆ್ಯಪ್‌ಗಳಿಲ್ಲದ (Clean UI) ಶುದ್ಧ ಆಂಡ್ರಾಯ್ಡ್ ಅನುಭವ ಸಿಗಲಿದೆ. ಯುನಿಸಾಕ್ 9863ಎ ಪ್ರೊಸೆಸರ್ ಜೊತೆಗೆ 4 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹಣೆ ನೀಡಲಾಗಿದೆ. ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಿಕೊಳ್ಳುವ ಆಯ್ಕೆಯೂ ಇದೆ.
ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ
ಫೋಟೋಗ್ರಫಿಗಾಗಿ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸಿಂಗಲ್ ಕ್ಯಾಮೆರಾ ನೀಡಲಾಗಿದ್ದು, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ದಿನವಿಡೀ ಫೋನ್ ಚಾರ್ಜ್ ಬರುವಂತೆ ನೋಡಿಕೊಳ್ಳಲು 5,000mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಅಳವಡಿಸಲಾಗಿದೆ. ಚಾರ್ಜಿಂಗ್‌ಗಾಗಿ ಟೈಪ್-ಸಿ ಪೋರ್ಟ್ (Type-C) ನೀಡಲಾಗಿದ್ದು, ಇದು 10W ಚಾರ್ಜಿಂಗ್ ಬೆಂಬಲಿಸುತ್ತದೆ. ಸುರಕ್ಷತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದೆ.
ಬೆಲೆ ಮತ್ತು ಲಭ್ಯತೆ
ಲಾವಾ ಯುವ ಸ್ಟಾರ್ 3 ಫೋನ್‌ನ 4GB + 64GB ಆವೃತ್ತಿಯ ಬೆಲೆ 7,499 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಮಾರ್ಚ್ 2026 ರಿಂದ ದೇಶಾದ್ಯಂತ ಇರುವ ರೀಟೈಲ್ ಸ್ಟೋರ್‌ಗಳಲ್ಲಿ ಈ ಫೋನ್ ಲಭ್ಯವಿರಲಿದೆ. ಇಂಡಸ್ ಬ್ಲ್ಯಾಕ್ ಮತ್ತು ಸಿಯಾಚಿನ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಗ್ರಾಹಕರು ಇದನ್ನು ಖರೀದಿಸಬಹುದು. ಗ್ರಾಹಕರ ಅನುಕೂಲಕ್ಕಾಗಿ ಕಂಪನಿಯು 1 ವರ್ಷದ ವಾರಂಟಿ ಜೊತೆಗೆ ಮನೆಯಲ್ಲೇ ಉಚಿತ ರಿಪೇರಿ ಸೇವೆ (Free At-Home Service) ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ : ಜಿಯೋ ಫೈನಾನ್ಸ್‌ನಿಂದ ಹೊಸ FD ಘೋಷಣೆ | ಹೂಡಿಕೆಗೆ ಭರ್ಜರಿ ಶೇ.8.15ರಷ್ಟು ಬಡ್ಡಿ!



















