ಬೆಂಗಳೂರು: ರಾಜ್ಯದ 108 ಆಂಬ್ಯುಲೆನ್ಸ್ ಸೇವೆ ಇನ್ಮುಂದೆ ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆಪ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಓಲಾ–ಊಬರ್ ಮಾದರಿಯಲ್ಲಿ ತ್ವರಿತ ಸೇವೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿ ಆಂಬ್ಯುಲೆನ್ಸ್‌ಗೂ ಡಿಜಿಟಲ್ ಟ್ಯಾಬ್‌ಗಳನ್ನು ನೀಡಲಾಗುತ್ತಿದ್ದು, ಚಾಲಕರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ರೋಗಿಗಳ ಆನ್‌ಲೈನ್ ಬುಕ್ಕಿಂಗ್ ವಿವರಗಳು, ಸ್ಥಳ ಮಾಹಿತಿ ಹಾಗೂ ಆಸ್ಪತ್ರೆಗೆ ಶಿಫ್ಟ್ ಮಾಡುವ ಮಾಹಿತಿಗಳು ನೇರವಾಗಿ ಟ್ಯಾಬ್‌ನಲ್ಲಿ ಲಭ್ಯವಾಗಲಿದೆ. ಜಿಪಿಎಸ್ ಆಧಾರಿತ ವ್ಯವಸ್ಥೆಯ ಮೂಲಕ ರೋಗಿ ಇರುವ ಸ್ಥಳಕ್ಕೆ ಹತ್ತಿರದ ಆಂಬ್ಯುಲೆನ್ಸ್ ಅನ್ನು ಡೈವರ್ಟ್ ಮಾಡಿ ತಕ್ಷಣ ಸೇವೆ ಒದಗಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಇದುವರೆಗೆ ಸರ್ಕಾರಿ ಆಂಬ್ಯುಲೆನ್ಸ್ ಸೇವೆ ತಡವಾಗಿ ಬರುತ್ತದೆ, ಸಮಯಕ್ಕೆ ಸಿಗುವುದಿಲ್ಲ ಎಂಬ ಸಾಲು ಸಾಲು ದೂರುಗಳು ಕೇಳಿಬಂದಿದ್ದವು. ಟೆಂಡರ್ ಪಡೆದಿದ್ದ ಜಿವಿಕೆ ಸಂಸ್ಥೆ ಮೇಲೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆ, ಆರೋಗ್ಯ ಇಲಾಖೆ ಸ್ವತಃ ನಿರ್ವಹಣೆ ಕೈಗೆತ್ತಿಕೊಂಡಿದೆ. ರಿಯಲ್ ಟೈಮ್ ಸೇವೆ ನೀಡಲು ಹೊಸ ಸಾಫ್ಟ್‌ವೇರ್ ಬಳಕೆ ಮಾಡುವುದಾಗಿ ಇಲಾಖೆ ತಿಳಿಸಿದೆ.
ಹೊಸ ವ್ಯವಸ್ಥೆಯಡಿ ಮೊಬೈಲ್ ಬದಲು ಟ್ಯಾಬ್ ನೀಡಲಾಗಿದ್ದು, ರೋಗಿ ಇರುವ ಸ್ಥಳದ ಕ್ಷಣಕ್ಷಣದ ಮಾಹಿತಿ, ಯಾವ ಆಂಬ್ಯುಲೆನ್ಸ್ ಎಲ್ಲಿ ಇದೆ, ಎಲ್ಲಿ ತುರ್ತು ಅವಶ್ಯಕತೆ ಇದೆ ಎಂಬ ಸಂಪೂರ್ಣ ವಿವರ ಲಭ್ಯವಾಗಲಿದೆ. ಅದರ ಆಧಾರದ ಮೇಲೆ ತಕ್ಷಣ ಆಂಬ್ಯುಲೆನ್ಸ್ ಕಳುಹಿಸಲಾಗುತ್ತದೆ. ಇದಕ್ಕಾಗಿ ಪ್ಯಾರಾಮೆಡಿಕಲ್ ಟೆಕ್ನಿಶಿಯನ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ 108 ಸೇವೆಯನ್ನು 112 ಎಮರ್ಜೆನ್ಸಿ ನಂಬರಿಗೆ ವಿಲೀನಗೊಳಿಸುವ ಚಿಂತನೆಯೂ ನಡೆಯುತ್ತಿದೆ. ಪೊಲೀಸ್ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಒಟ್ಟಿಗೆ ಒದಗಿಸುವ ಸಮಗ್ರ ವ್ಯವಸ್ಥೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ



















