ಮಥುರಾ : ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಖಪ್ಪರಪುರ ಎಂಬ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಮನೀಶ್ ಕುಮಾರ್ (35) ಎಂಬಾತ ತನ್ನ ಪತ್ನಿ ಮತ್ತು ಮೂವರು ಪುಟ್ಟ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಮನೀಶ್ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದು, ಅದರಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿರುವುದು ಈಗ ಬೆಳಕಿಗೆ ಬಂದಿದೆ.
ಗೋಡೆಯ ಮೇಲೆ ಡೆತ್‌ನೋಟ್, ಮೊಬೈಲ್‌ನಲ್ಲಿ ವಿಡಿಯೋ
ಮಂಗಳವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಮನೀಶ್‌ನ ಮನೆಯ ಗೋಡೆಯ ಮೇಲೆ “ನಾವು ನಮ್ಮ ಸ್ವಯಂ ಇಚ್ಛೆಯಿಂದ ಸಾಯುತ್ತಿದ್ದೇವೆ” ಎಂಬ ಬರಹ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ತನ್ನ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಮನೀಶ್, “ನಾವು ನಮ್ಮ ಇಚ್ಛೆಯಂತೆಯೇ ಸಾಯುತ್ತಿದ್ದೇವೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ. ದಯವಿಟ್ಟು ಪೊಲೀಸರು ಯಾರಿಗೂ ತೊಂದರೆ ಕೊಡಬಾರದು. ನಾನು ಬಹಳ ಮಾನಸಿಕವಾಗಿ ನೊಂದಿದ್ದೆ” ಎಂದು ಹೇಳಿದ್ದಾನೆ. ಇತ್ತೀಚೆಗೆ ಮನೀಶ್ 12 ಲಕ್ಷ ರೂಪಾಯಿಗೆ ನಿವೇಶನವೊಂದನ್ನು ಮಾರಾಟ ಮಾಡಿದ್ದು, ಈ ವ್ಯವಹಾರಕ್ಕೂ ತನ್ನ ಸಾವಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಭೀಕರ ಸತ್ಯ
ಆರಂಭದಲ್ಲಿ ಇಡೀ ಕುಟುಂಬ ಹಾಲಿನಲ್ಲಿ ವಿಷ ಬೆರೆಸಿ ಸೇವಿಸಿ ಸತ್ತಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿದೆ. ಮನೀಶ್ ತನ್ನ ಪತ್ನಿ ಸೀಮಾ ಮತ್ತು ಮಕ್ಕಳಾದ ಹನಿ (8), ಪ್ರಿಯಾಂಶಿ (5) ಹಾಗೂ ಪ್ರತೀಕ್ (3)ರನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಪತ್ನಿಯ ಶವವನ್ನು ನೇಣು ಬಿಗಿದು, ತಾನು ವಿದ್ಯುತ್ ಪ್ರವಹಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಥುರಾ ಎಸ್‌ಎಸ್‌ಪಿ ಶ್ಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಎಷ್ಟು ಹೊತ್ತಾದರೂ ಮಕ್ಕಳು ಆಟವಾಡಲು ಹೊರಗೆ ಬರದಿದ್ದಾಗ ಅನುಮಾನಗೊಂಡ ನೆರೆಹೊರೆಯವರು ಮನೆಯ ಕಿಟಕಿಯಿಂದ ನೋಡಿದ್ದಾರೆ. ಒಳಗೆ ಯಾರೂ ಸ್ಪಂದಿಸದಿದ್ದಾಗ ಮನೀಶ್‌ನ ಸಹೋದರ ಗೋಡೆಯನ್ನು ಒಡೆದು ಒಳಗೆ ಹೋದಾಗ ಈ ಕರಾಳ ದೃಶ್ಯ ಕಂಡುಬಂದಿದೆ. 2018ರಲ್ಲಿ ಮದುವೆಯಾಗಿದ್ದ ಈ ದಂಪತಿ ಸುಖವಾಗಿಯೇ ಸಂಸಾರ ಮಾಡುತ್ತಿದ್ದರು, ಆದರೆ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ನಿಖರವಾದ ಕಾರಣವೇನು ಎಂಬ ಸತ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸದ್ಯ ಪೊಲೀಸರು ಡೈರಿ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ‘ನನ್ನ ಆಸೆ ಈಡೇರಿಸು’.. ಸೊಸೆಗೆ ಲೈಂಗಿಕ ಕಿರಿಕುಳ ನೀಡಿದ ಮಾವನ ವಿರುದ್ಧ ಕಂಪ್ಲೇಂಟ್!



















