ನವದೆಹಲಿ : ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿಯಾಗಿ ಆಹ್ವಾನ ನೀಡಿದ್ದಾರೆ. ಈ ಕುರಿತ ಫೋಟೋಗಳನ್ನು ಸಚಿನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಅವರು ಮುಂದಿನ ತಿಂಗಳು ಸಾನಿಯಾ ಚಾಂದೋಕ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್, ಪತ್ನಿ ಅಂಜಲಿ ಅವರೊಂದಿಗೆ ದೆಹಲಿಗೆ ತೆರಳಿ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಮಾತ್ರವಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಹ ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದಾರೆ.
ಮಾರ್ಚ್‌ನಲ್ಲಿ ವಿವಾಹ ಸಂಭ್ರಮ
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹವು ಮಾರ್ಚ್ 5 ರಂದು ನಡೆಯಲಿದೆ. ಮಾರ್ಚ್ 3 ರಂದು ವಿವಾಹ ಪೂರ್ವ ಶಾಸ್ತ್ರಗಳು ಆರಂಭವಾಗಲಿದ್ದು, ಮಾರ್ಚ್ 5 ರಂದು ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಆತ್ಮೀಯ ಸಮಾರಂಭ ನಡೆಯಲಿದೆ. 26 ವರ್ಷದ ಎಡಗೈ ವೇಗಿ ಅರ್ಜುನ್, ಕಳೆದ ವರ್ಷ ಆಗಸ್ಟ್‌ನಲ್ಲಿ ಸಾನಿಯಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಗಣ್ಯರ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿನ್, “ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಆಹ್ವಾನಿಸಲು ನಮಗೆ ಗೌರವ ಸಿಕ್ಕಿದೆ. ಮೋದಿ ಜಿ, ನಿಮ್ಮ ಆಶೀರ್ವಾದ ಮತ್ತು ಯುವ ದಂಪತಿಗೆ ನೀಡಿದ ಸಲಹೆಗಾಗಿ ಧನ್ಯವಾದಗಳು,” ಎಂದು ತಿಳಿಸಿದ್ದಾರೆ. ಹಾಗೆಯೇ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಮುರ್ಮು ಅವರು ನೀಡಿದ ಆತ್ಮೀಯ ಆತಿಥ್ಯವನ್ನೂ ಸ್ಮರಿಸಿದ್ದಾರೆ.
ಯಾರು ಈ ಸಾನಿಯಾ ಚಾಂದೋಕ್?
ಸಾನಿಯಾ ಚಾಂದೋಕ್ ಮುಂಬೈನ ಪ್ರತಿಷ್ಠಿತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಇವರ ಕುಟುಂಬವು ಆತಿಥ್ಯ (Hospitality) ಮತ್ತು ಆಹಾರ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದು, ಇಂಟರ್ ಕಾಂಟಿನೆಂಟಲ್ ಹೋಟೆಲ್ ಮತ್ತು ಪ್ರಸಿದ್ಧ ‘ಬ್ರೂಕ್ಲಿನ್ ಕ್ರೀಮರಿ’ ಐಸ್‌ಕ್ರೀಮ್ ಬ್ರ್ಯಾಂಡ್ ಅನ್ನು ಹೊಂದಿದೆ. ಸಾನಿಯಾ ಅವರು ಮುಂಬೈ ಮೂಲದ ‘ಶ್ರೀ ಪಾವ್ಸ್ ಪೆಟ್ ಸ್ಪಾ & ಸ್ಟೋರ್ ಎಲ್‌ಎಲ್‌ಪಿ’ಯಲ್ಲಿ ನಿರ್ದೇಶಕಿಯಾಗಿದ್ದಾರೆ.
ಇದನ್ನೂ ಓದಿ : 1 ಲಕ್ಷ ಲಂಚ ಪಡೆಯುವಾಗ ‘ಲೋಕಾ’ ಬಲೆಗೆ ಬಿದ್ದ PWD ಅಧಿಕಾರಿಗಳು!



















