ಬೆಂಗಳೂರು: ಸಾಲ ಕೊಡಿಸುವುದಾಗಿ ನಂಬಿಸಿ ಹಲವು ಉದ್ಯಮಿಗಳಿಗೆ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪೀಟರ್ ಡ್ಯಾಡಿ ಎಂಬಾತನ ನಿವಾಸದ ಮೇಲೆ ಸಿಐಡಿ ಆರ್ಥಿಕ ಅಪರಾಧ ದಳ ದಾಳಿ ನಡೆಸಿದೆ.
ಕೋಲ್ಸ್ ಪಾರ್ಕ್ ಪ್ರದೇಶದಲ್ಲಿರುವ ಪೀಟರ್ ಡ್ಯಾಡಿ ನಿವಾಸದ ಮೇಲೆ ದಾಳಿ ಮಾಡಿ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪೀಟರ್ ಡ್ಯಾಡಿ ವಿರುದ್ಧ ಈಗಾಗಲೇ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸ್ ಮಾಹಿತಿಯಂತೆ, ಲೋನ್ ಕೊಡಿಸುವುದಾಗಿ ಉದ್ಯಮಿಗಳಿಗೆ ಭರವಸೆ ನೀಡಿ, ಚೆಕ್ ಶ್ಯೂರಿಟಿ ಪಡೆದುಕೊಳ್ಳುತ್ತಿದ್ದ ಪೀಟರ್ ಡ್ಯಾಡಿ, ಪ್ರೊಸೆಸಿಂಗ್ ಫೀಸ್ ಹಾಗೂ ಲ್ಯಾಂಡ್ ಡೀಲ್ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
ನೀಡಿದ ಹಣವನ್ನು ವಾಪಸ್ ಕೇಳಿದಾಗ, ಉದ್ಯಮಿಗಳ ವಿರುದ್ಧವೇ ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದ ಆರೋಪವೂ ಪೀಟರ್ ಡ್ಯಾಡಿ ಮೇಲೆ ಕೇಳಿಬಂದಿದೆ. ಪೀಟರ್ ಡ್ಯಾಡಿ ವಿರುದ್ಧ ಬೆಂಗಳೂರಿನ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ, ಪುಲಕೇಶಿನಗರ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ಆರ್ಥಿಕ ಅಪರಾಧ ದಳ, ಸದ್ಯ ಪೀಟರ್ ಡ್ಯಾಡಿ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಇದನ್ನೂ ಓದಿ : ಮೈಸೂರು | ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿ ಸಭೆ



















