ಮೈಸೂರು : ಮಾರ್ಚ್ 30ರಂದು ದಕ್ಷಿಣಕಾಶಿ ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಹಾಗೂ ಗೌತಮ ಪಂಚ ಮಹಾ ರಥೋತ್ಸವ ನಡೆಯಲಿರುವ ಹಿನ್ನೆಲೆ, ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಮುಖ್ಯ ರಸ್ತೆಗಳ ಮೇಲೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಕಟ್ಟುನಿಟ್ಟಿನ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಬಸ್ ನಿಲ್ದಾಣ ಹಾಗೂ ದೇವಾಲಯದ ಆಯ್ದ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಭದ್ರತೆಗಾಗಿ ತಾತ್ಕಾಲಿಕ ವಾಚ್ ಟವರ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಥೋತ್ಸವದ ಸಂದರ್ಭದಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದು, ರಥಗಳನ್ನು ಮುಂಚಿತವಾಗಿ ಪರಿಶೀಲನೆ ಮಾಡುವುದು, ಹಳ್ಳಗಳು ಇದ್ದಲ್ಲಿ ಸಮತಟ್ಟು ಮಾಡುವಂತೆ ಸೂಚನೆ ನೀಡಲಾಯಿತು.
ಭಕ್ತರಿಗೆ ಸೂಕ್ತ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು, ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಸುವುದು ಹಾಗೂ ನದಿಯ ಸ್ವಚ್ಛತೆಗೊಳಿಸುವುದಕ್ಕೂ ಮಹತ್ವ ನೀಡಲಾಯಿತು.
ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು, ರಥೋತ್ಸವ ವೇಳೆ ವಿವಿಧ ಸಂಸ್ಥೆಗಳಿಂದ ವಿತರಿಸುವ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಲಾಯಿತು.
ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಗ್ರಾಮಸ್ಥರು ಹಾಗೂ ಎಲ್ಲಾ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು.
ಇದನ್ನೂ ಓದಿ : ಬೈಂದೂರು | ಸೇವಾ ಭಾರತಿ ಕನ್ನಾಡಿ ಸಂಸ್ಥೆಯ ಸಹಯೋಗದಲ್ಲಿ ಮನಚೇತನ ಕೇಂದ್ರ ಸೇವಾಧಾಮದ ಪ್ರವೇಶೋತ್ಸವ



















