ನವದೆಹಲಿ : ಇಟಲಿಯ ಪ್ರಖ್ಯಾತ ಐಷಾರಾಮಿ ಕಾರು ತಯಾರಕ ಸಂಸ್ಥೆ ಫೆರಾರಿ, ಭಾರತೀಯ ಮಾರುಕಟ್ಟೆಗೆ ತನ್ನ ಹೊಚ್ಚಹೊಸ ಮೇರುಕೃತಿ ‘ಅಮಾಲ್ಫಿ’ (Amalfi) ಕಾರನ್ನು ಅಧಿಕೃತವಾಗಿ ಪರಿಚಯಿಸಿದೆ. ₹5.59 ಕೋಟಿ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಗ್ರ್ಯಾಂಡ್ ಟೂರರ್ ಕಾರು, ಫೆರಾರಿಯ ಜನಪ್ರಿಯ ‘ರೋಮಾ’ ಮಾಡೆಲ್‌ನ ಉತ್ತರಾಧಿಕಾರಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಟಲಿಯ ಸುಂದರ ಕರಾವಳಿ ತೀರವಾದ ‘ಅಮಾಲ್ಫಿ ಕೋಸ್ಟ್’ ಹೆಸರನ್ನು ಈ ಕಾರಿಗೆ ಇಡಲಾಗಿದೆ.

ವೇಗದ ಅಸುರ: ಎಂಜಿನ್ ಸಾಮರ್ಥ್ಯ
ಅಮಾಲ್ಫಿ ಕಾರಿನ ಹೃದಯಭಾಗದಲ್ಲಿ ಅತ್ಯಾಧುನಿಕ 3.9-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು ಹಿಂದಿನ ರೋಮಾ ಕಾರಿಗಿಂತ 19 ಬಿಎಚ್‌ಪಿ ಹೆಚ್ಚು, ಅಂದರೆ ಬರೋಬ್ಬರಿ 631 Bhp ಗರಿಷ್ಠ ಶಕ್ತಿ ಮತ್ತು 760 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 8-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಮೂಲಕ ಹಿಂಬದಿ ಚಕ್ರಗಳಿಗೆ (Rear-wheel drive) ಶಕ್ತಿ ರವಾನೆಯಾಗುತ್ತದೆ. ಇದರ ವೇಗದ ಅಂಕಿಅಂಶಗಳು ರೋಚಕವಾಗಿವೆ. ಕೇವಲ 2.9 ಸೆಕೆಂಡುಗಳಲ್ಲಿ 0 ಇಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಅಮಾಲ್ಫಿ, 7.9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗವನ್ನು ಮುಟ್ಟಬಲ್ಲದು. ಈ ಕಾರಿನ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ.ಗೂ ಅಧಿಕವಾಗಿದ್ದು, ಸೂಪರ್-ಜಿಟಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ವಿನ್ಯಾಸ ಮತ್ತು ಒಳಾಂಗಣ
1960ರ ದಶಕದ ಪ್ರಸಿದ್ಧ ಫೆರಾರಿ 365 GTB/4 ‘ಡೇಟೋನಾ’ದಂತಹ ಕ್ಲಾಸಿಕ್ ಕಾರುಗಳಿಂದ ಸ್ಫೂರ್ತಿ ಪಡೆದು ಅಮಾಲ್ಫಿಯನ್ನು ವಿನ್ಯಾಸಗೊಳಿಸಲಾಗಿದೆ. ಉದ್ದನೆಯ ಬಾನೆಟ್ ಮತ್ತು ಕ್ಲಾಸಿಕ್ ಸಿಲೂಯೆಟ್ ಹೊಂದಿದ್ದರೂ, ತಂತ್ರಜ್ಞಾನದಲ್ಲಿ ಇದು ಸಂಪೂರ್ಣ ಆಧುನಿಕವಾಗಿದೆ. ಒಳಾಂಗಣದಲ್ಲಿ ಸಾಂಪ್ರದಾಯಿಕ ಸೆಂಟ್ರಲ್ ಸ್ಕ್ರೀನ್ ಅನ್ನು ಕೈಬಿಡಲಾಗಿದ್ದು, ಚಾಲಕನಿಗೆ ಸಂಪೂರ್ಣ ಡಿಜಿಟಲ್ ಕಾಕ್‌ಪಿಟ್ ಒದಗಿಸಲಾಗಿದೆ. ವಿಶೇಷವೆಂದರೆ, ಸಹ-ಪ್ರಯಾಣಿಕರಿಗೂ ವೇಗ ಮತ್ತು ಎಂಜಿನ್ ಮಾಹಿತಿ ನೋಡಲು ಅಥವಾ ಸಂಗೀತ ನಿಯಂತ್ರಿಸಲು ಪ್ರತ್ಯೇಕ ಡಿಸ್‌ಪ್ಲೇ ನೀಡಲಾಗಿದೆ.

ಭಾರತದಲ್ಲಿ ಲಭ್ಯತೆ
ಸದ್ಯ ಘೋಷಿಸಿರುವ ₹5.59 ಕೋಟಿ ಎಂಬುದು ಕೇವಲ ಆರಂಭಿಕ ಬೆಲೆಯಾಗಿದ್ದು, ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡಿಕೊಂಡರೆ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ಕಾರುಗಳ ವಿತರಣೆ ಆರಂಭವಾಗಲಿದ್ದರೂ, ಜಾಗತಿಕವಾಗಿ ಇರುವ ಭಾರೀ ಬೇಡಿಕೆಯಿಂದಾಗಿ ಭಾರತಕ್ಕೆ ನಿಗದಿಪಡಿಸಲಾದ ಮೊದಲ ವರ್ಷದ ಯುನಿಟ್‌ಗಳು ಈಗಾಗಲೇ ಬಿಕರಿಯಾಗಿರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 5,138 ಹುದ್ದೆಗಳ ನೇಮಕ | ಕನ್ನಡಿಗರಿಗೂ ಇವೆ ಅವಕಾಶಗಳು



















