ಬೆಂಗಳೂರು : ಬೆಂಗಳೂರು ನಗರದ ಕಸ ವಿಲೇವಾರಿ ಗುತ್ತಿಗೆ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಸ ವಿಲೇವಾರಿ ಟೆಂಡರ್‌ನಲ್ಲಿ ಆಂಧ್ರ ಮೂಲದ ಒಂದೇ ಕುಟುಂಬಕ್ಕೆ ಎಂಟು ಪ್ಯಾಕೇಜ್‌ಗಳು ಲಭಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು ನಗರದ ತ್ಯಾಜ್ಯ ವಿಲೇವಾರಿಗಾಗಿ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಹಲವು ಬಾರಿ ಟೆಂಡರ್ ಆಹ್ವಾನಿಸಿತ್ತು. ಆದರೆ ಅಗತ್ಯ ನಿಯಮಗಳು ಮತ್ತು ಮಾನದಂಡಗಳನ್ನು ಪೂರೈಸದ ಕೆಲವು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ಅಂತಿಮವಾಗದೆ ಮುಂದೂಡಲ್ಪಟ್ಟಿತ್ತು. ಇದೀಗ ಕಳೆದ ತಿಂಗಳು ರಾಜ್ಯ ಸರ್ಕಾರ ಹೊಸ ಟೆಂಡರ್ ಆಹ್ವಾನಿಸಿ, ಅದನ್ನು ಅಂತಿಮಗೊಳಿಸಿದೆ.

ನಗರದ ಕಸ ವಿಲೇವಾರಿಗಾಗಿ ಒಟ್ಟು ಸುಮಾರು 33 ಪ್ಯಾಕೇಜ್‌ಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಒಂದೇ ಕುಟುಂಬದ ಸುಮಾರು ಎಂಟು ಮಂದಿಗೆ ಬಹುಕೋಟಿ ಮೌಲ್ಯದ ಗುತ್ತಿಗೆ ಸಿಕ್ಕಿರುವುದು ಚರ್ಚೆಗೆ ಗ್ರಾಸವಾಗಿದೆ. ಆಂಧ್ರ ಮೂಲದ ಪಾಣತಿ ಕುಟುಂಬಕ್ಕೆ ಟೆಕ್ನಿಕಲ್ ಅನುಮೋದನೆ ನೀಡಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಗುತ್ತಿಗೆ ಹಂಚಿಕೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ನಗರಪಾಲಿಕೆ ನಿಯಮಗಳನ್ನು ಉಲ್ಲಂಘಿಸಿ ಕಪ್ಪುಪಟ್ಟಿಯಲ್ಲಿರುವ ಕಂಪನಿಗಳಿಗೆ ಗುತ್ತಿಗೆ ನೀಡಿರುವುದು ಕಾನೂನುಬಾಹಿರ ಎಂದು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ಮುಂದಿನ ಸ್ಪಷ್ಟೀಕರಣದತ್ತ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ : ಶೀಘ್ರದಲ್ಲೇ ಜನರಿಗೆ ಮತ್ತೊಂದು ದರ ಹೆಚ್ಚಳ ಶಾಕ್..! ಏಪ್ರಿಲ್‌ನಲ್ಲಿ ಕರೆಂಟ್ ದರ ಏರಿಕೆ?



















