ಉತ್ತರ ಕನ್ನಡ | ಭಟ್ಕಳದಲ್ಲಿ ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 8 ತೊಲೆ ಬಂಗಾರ ಹಾಗೂ ಬಟ್ಟೆಗಳಿದ್ದ ಬ್ಯಾಗನ್ನು ಪ್ರಾಮಾಣಿಕ ಆಟೋ ಚಾಲಕರೊಬ್ಬರು ಪೊಲೀಸ್ ಠಾಣೆಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ತೆಂಗಿನಗುಂಡಿ ನಿವಾಸಿ, ಆಟೋ ಚಾಲಕ ಮೋಹನ್ ತಿಮ್ಮಪ್ಪ ನಾಯ್ಕ್ ಪ್ರಾಮಾಣಿಕತೆ ಮೆರೆದ ಚಾಲಕರಾಗಿದ್ದಾರೆ.
ಕುಮಟಾ ನಿವಾಸಿ ಸವಿತಾ ಮಹಾಬಲೇಶ್ವರ ಅಂಬಿಗ ಎಂಬುವ ಮಹಿಳೆ ಹೆಬಳೆಯಿಂದ ಭಟ್ಕಳದ ಹೊಸ ಬಸ್ ನಿಲ್ದಾಣಕ್ಕೆ ಆಟೋ ರಿಕ್ಷಾದಲ್ಲಿ ಆಗಮಿಸಿದ್ದರು. ಕುಮಟಾಕ್ಕೆ ತೆರಳುವ ಗಡಿಬಿಡಿಯಲ್ಲಿ ಅವರು ತಮ್ಮ ಬಟ್ಟೆಗಳು ಹಾಗೂ ಸುಮಾರು 8 ತೊಲೆ ಬಂಗಾರದ ಆಭರಣಗಳಿದ್ದ ಬ್ಯಾಗನ್ನು ರಿಕ್ಷಾದಲ್ಲೇ ಮರೆತು ಹೋಗಿದ್ದರು. ಇದರ ಬೆಲೆ ಸರಿ ಸುಮಾರು 10 ಲಕ್ಷ ರೂಪಾಯಿಯಾಗಿತ್ತು.
ಬ್ಯಾಗ್ ಕಳೆದುಹೋದ ಕೂಡಲೇ ಈ ಕುರಿತು ರಿಕ್ಷಾ ಚಾಲಕರ ವಲಯದಲ್ಲಿ ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಮಾಹಿತಿಯನ್ನು ಗಮನಿಸಿದ ಚಾಲಕ ಮೋಹನ್ ನಾಯ್ಕ್ ಅವರು ತಕ್ಷಣ ತಮ್ಮ ರಿಕ್ಷಾವನ್ನು ಪರಿಶೀಲಿಸಿದಾಗ, ಪ್ರಯಾಣಿಕರು ಕುಳಿತುಕೊಳ್ಳುವ ಹಿಂಭಾಗದಲ್ಲಿ ಬ್ಯಾಗ್ ಇರುವುದು ಕಂಡುಬಂದಿದೆ.
ಬ್ಯಾಗ್ ದೊರೆತ ಕೂಡಲೇ ಚಾಲಕ ಮೋಹನ್ ಅವರು ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಬ್ಯಾಗನ್ನು ಒಪ್ಪಿಸಿದ್ದಾರೆ. ನಂತರ ಠಾಣೆಯ ಎಎಸ್‌ಐ ಮಂಜುನಾಥ ಗೌಡರ್ ಅವರ ಸಮ್ಮುಖದಲ್ಲಿ ಬ್ಯಾಗನ್ನು ಅದರ ವಾರಸುದಾರರಾದ ಶ್ರೀಮತಿ ಸವಿತಾ ಅವರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ : ‘ಥೂ ನಿಮ್ ಯೋಗ್ಯತೆಗೆ ಬೆಂಕಿ ಹಾಕಾ.. ಮಾನ ಮರ್ಯಾದೆ ಇದ್ಯಾ?’ ಸದನದಲ್ಲಿ ರೊಚ್ಚಿಗೆದ್ದ ಶಿವಲಿಂಗೇಗೌಡ!



















