ಬೆಂಗಳೂರು | ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಆರೋಪ ಪ್ರಕರಣದ ಸಮಗ್ರ ತನಿಖೆಗೆ ಮೂವರು ಹಿರಿಯ ಮುಖ್ಯ ಅಭಿಯಂತರರ ತಂಡ ರಚಿಸಿ ಆದೇಶ ಹೊರಡಿಸಲಾಗಿದೆ.
ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತನಿಖೆಗೆ ಆದೇಶಿಸಿದ್ದು, ಫೆಬ್ರವರಿ 5ರ ಒಳಗಾಗಿ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನೇ ರಚನೆ ಮಾಡಲಾಗಿದ್ದು, ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತನಿಖೆಗೆ ಆದೇಶ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ |
ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಇನ್ನು, ಕನಕಪುರ ರಸ್ತೆ ಪೈಪ್ ಲೈನ್ ರೋಡ್ ನಲ್ಲಿ ಬೆಂಗಳೂರು ಜಲಮಂಡಳಿ ಕಾಮಗಾರಿ ನಡೆಸುತ್ತಿತ್ತು. ಕಾಮಗಾರಿಗಾಗಿ ಚೇಂಬರ್ ಅನ್ನು ತೆಗೆದು ಮುಚ್ಚದೇ ಹಾಗೆ ಬಿಟ್ಟಿತ್ತು. ಬಾಯಿ ತೆರೆದುಕೊಂಡಿದ್ದ ಜಲಮಂಡಳಿಯ ಚೇಂಬರ್‌ಗೆ ಬಾಲಕ ಪ್ರೀತಂ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಪ್ರೀತಂ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘಟನೆಗೆ BWSSB ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ | ಶಾಲಾ ಮಕ್ಕಳ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳ ಪತ್ತೆ.. ಪೋಷಕರ ಆಕ್ರೋಶ!



















