ಬೆಂಗಳೂರು : GBA ವ್ಯಾಪ್ತಿಯ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ದಿಮೆ ಪರವಾನಿಗೆ ನವೀಕರಣ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೊಸ ಅದೇಶ ಹೊರಡಿಸಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರು ಈ ತಿಂಗಳ ಅಂತ್ಯದೊಳಗೆ ತಮ್ಮ ವ್ಯಾಪಾರದ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಶುಲ್ಕದ ಶೇಕಡಾ 100ರಷ್ಟು ದಂಡ ಪಾವತಿ ಮಾಡಿ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.

ಉದ್ದಿಮೆದಾರರ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ ಲೈಸೆನ್ಸ್ ನವೀಕರಣ ಮಾಡಲು ಕಳೆದ ಸಾಲಿನಂತೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಪಾವತಿಸಿಕೊಳ್ಳಬೇಕಿರುತ್ತದೆ. ದಿನಾಂಕ : 02 -02-2026 ರಿಂದ 28-02-2026 ರವರೆಗೆ ದಂಡವಿಲ್ಲದೇ ಪರವಾನಗಿ ಶುಲ್ಕವನ್ನು ಪಾವತಿಸಿಕೊಳ್ಳಬಹುದು. ದಿನಾಂಕ 01-03-2026ರಿಂದ 31-03-2026ರವರೆಗೆ ಪರವಾನಿಗೆ ನವೀಕರಣ ಶುಲ್ಕದ ಶೇಕಡಾ 25%ರಷ್ಟು ದಂಡ ಮೊತ್ತದೊಂದಿಗೆ ಲೈಸೆನ್ಸ್ ಪರವಾನಿಗೆ ನವೀಕರಿಸಬಹುದು. ದಿನಾಂಕ : 01-04-2026 ರಿಂದ ಉದ್ದಿಮೆ ಪರವಾನಿಗೆ ಶುಲ್ಕದ ಶೇಕಡಾ 100%ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಗುತ್ತೆ ಅಂತ ಉದ್ದಿಮೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನು, ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಕಡಿಮೆ ಇರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಿಗೆಯನ್ನು ತಡೆ ಹಿಡಿದು ಹಿಂಬರಹ ನೀಡಿ ತಿರಸ್ಕರಿಸುವ ಅಧಿಕಾರ ಅಧಿಕಾರಿಗಳಿಗೆ ನೀಡಲಾಗಿದೆ.
ವಾಹನ ನಿಲುಗಡೆ ಪ್ರದೇಶದಲ್ಲಿ ಅಥವಾ ರೂಫ್ ಟಾಪ್‌ಗಳಲ್ಲಿ ನಡೆಸುತ್ತಿದ್ದಲ್ಲಿ ಪರವಾನಿಗೆ ನವೀಕರಣವನ್ನು ತಡೆ ಹಿಡಿದು ಹಿಂಬರಹ ನೀಡಿ ತಿರಸ್ಕರಿಸ ಬಹುದು ಅಥವಾ ಪರವಾನಗಿಯನ್ನು ರದ್ದು ಮಾಡಲು ಅವಕಾಶ ಇದೆ ಅಂತ ಆದೇಶದಲ್ಲಿ ಸೂಚಿಸಲಾಗಿದೆ. ಇನ್ನು ಘನತ್ಯಾಜ್ಯ ಘಟಕದ ನಿಯಮದಂತೆ 100 ಕೆ.ಜಿ.ಗಿಂತ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿ ಮಾಡುವ ಉದ್ದಿಮೆಗಳಿಂದ ಮೂಲ ಸ್ಥಳದಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದು ತ್ಯಾಜ್ಯಗಳ ವಿಲೇವಾರಿಗೆ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪ್ರತಿಯನ್ನು ಪಡೆದು ನವೀಕರಿಸುವುದು.
ಕಲ್ಯಾಣ ಮಂಟಪ, ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸರಬರಾಜು ಮಾಡುವ ಉದ್ದಿಮೆಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಕುರಿತು ಲಿಖಿತ ಹೇಳಿಕೆ ಪಡೆದುಕೊಂಡು ವ್ಯಾಪಾರದ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು ಸೂಚಿಸಿ ಲೈಸೆನ್ಸ್ ನವೀಕರಣಕ್ಕೆ ಅವಕಾಶ ನೀಡಲಾಗಿದೆ. 5 ನಗರ ಪಾಲಿಕೆಗಳ ಆರೋಗ್ಯಾಧಿಕಾರಿಗಳು, ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮೇಲಿನ ಅಂಶಗಳನ್ನು ಪರಿಗಣಿಸಿ 2026-27ನೇ ಸಾಲಿನ ಉದ್ದಿಮೆ ನವೀಕರಣವನ್ನು ಅವಧಿ ಮೀರಿದ ಉದ್ದಿಮೆದಾರರ ಬಳಿ ದಂಡ ಸಮೇತ ವಸೂಲಿಗೆ ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಕುಂದಾಪುರ | ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲ್ ಕಡಲಾಮೆಗಳ ಮೊಟ್ಟೆಗೆ ಗೂಡು ನಿರ್ಮಿಸಿ ಭದ್ರತೆ



















