ಕುಂದಾಪುರ | ಆಲಿವ್ ರಿಡ್ಲ್ ಆಮೆಗಳ ಪ್ರಸಿದ್ಧ ತಾಣ ಒಡಿಶಾದ ಗಹಿರ್ ಮಠ. ಇವುಗಳು ಕಡಲಬ್ಬರದ ನಡುವೆ ಲಕ್ಷಾಂತರ ಸಂಖ್ಯೆಯಲ್ಲಿ ತೀರಕ್ಕೆ ಬಂದು ಮೊಟ್ಟೆಯನ್ನಿಟ್ಟು ತೆರಳುತ್ತವೆ. ಅದೇ ರೀತಿಯಲ್ಲಿ ಕರ್ನಾಟಕದ ಕರಾವಳಿಗೂ ಇವುಗಳು ಬರುತ್ತವೆ. ಸಂಖ್ಯೆ ಕಡಿಮೆಯಿದ್ದರೂ ರಕ್ಷಣೆಗೆ ಕೊರತೆಯಿಲ್ಲ. ಹೆಚ್ಚಾಗಿ ಜನವರಿ ಫೆಬ್ರವರಿ ಹುಣ್ಣಿಮೆ ಸಂದರ್ಭದಲ್ಲಿ ದಡ ಸೇರುವ ಕಡಲಾಮೆ, ತೀರದಲ್ಲಿ ಮರಳಿನೆಡೆಗೆ ಬಂದು ಅಲ್ಲಿ ಗುಂಡಿಯನ್ನು ತೆಗೆದು ಮೊಟ್ಟೆಯನ್ನಿಡುತ್ತದೆ.
ಒಂದು ಬಾರಿ ಮೊಟ್ಟೆಯನ್ನಿಟ್ಟಾಗ ನೂರರಿಂದ ನೂರೈವತ್ತು ಮೊಟ್ಟೆಗಳನ್ನಿಡುತ್ತದೆ. ಆ ಬಳಿಕ ಅದನ್ನು ಯಾರಿಗೂ ತಿಳಿಯದಂತೆ ಮರಳಿನಿಂದ ಮುಚ್ಚಿ ಮತ್ತೆ ಕಡಲಿಗೆ ಹೋಗುತ್ತದೆ. ನಂತರ ಈ ಮೊಟ್ಟೆಗಳು ಮರಳಿನಲ್ಲಿ ಇದ್ದು, ಸುಮಾರು 50 ದಿನಗಳ ಬಳಿಕ ಇದರಿಂದ ಮರಿಗಳು ಹೊರಬರುತ್ತದೆ. ಈ ಮರಿಗಳು ಅರಬ್ಬಿ ಸಮುದ್ರದತ್ತ ಮುಖ ಮಾಡಿ ಎಲ್ಲಾ ಒಟ್ಟಾಗಿ ಸಮುದ್ರ ಸೇರಿಕೊಳ್ಳುತ್ತದೆ. ಅದರಂತೆ ಈ ಭಾರೀ ಕುಂದಾಪುರದ ಕೋಡಿ ಕಿನಾರೆಯಲ್ಲಿ ಅರಣ್ಯ ಅಧಿಕಾರಿಗಳು ಎರಡು ಗೂಡುಗಳನ್ನು ನಿರ್ಮಿಸಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿದ್ದಾರೆ.
ಹುಟ್ಟಿದ ಜಾಗಕ್ಕೆ ಮತ್ತೆ ಬಂದು ಮೊಟ್ಟೆ ಇಡುವ ಶಕ್ತಿ ಈ ಆಮೆಗಳಿಗಿದೆ |
ಸಮುದ್ರ ಆಮೆಗಳು ಆಹಾರಕ್ಕಾಗಿ ಮತ್ತು ಸಂತಾನೋತ್ಪತ್ತಿಗಾಗಿ ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದ ಕಡಲು ಪ್ರದೇಶಗಳ ನಡುವೆ ಪ್ರಯಾಣಿಸುತ್ತವೆ. ಇಷ್ಟೆಲ್ಲ ದೂರ ಸಾಗುವ ಇವು ಮತ್ತೆ ಮೊಟ್ಟೆ ಇಡಲು ತಮ್ಮ ಹುಟ್ಟಿದ ಸ್ಥಳದ ಕಡಲತೀರಗಳಿಗೆ ವಾಪಸು ಬರುತ್ತವೆ.
ಆಲಿವ್ ರಿಡ್ಲಿಯಂತಹ ಆಮೆಗಳಿಗೆ ಭೂಮಿಯ ಕಾಂತಕ್ಷೇತ್ರವನ್ನು ಗ್ರಹಿಸುವ ಶಕ್ತಿಯಿದೆ, ಇದನ್ನು ಅವು ದಿಕ್ಸೂಚಿಯಂತೆ ಬಳಸಿಕೊಂಡು ಸಾವಿರಾರು ಮೈಲುಗಳಷ್ಟು ದೂರದ ತಮ್ಮ ಹುಟ್ಟಿದ ಕಡಲತೀರಗಳಿಗೆ ಮರಳುತ್ತವೆ.ಇದು ಆನುವಂಶಿಕವಾಗಿ ಬಂದ ನೈಸರ್ಗಿಕ `ಜಿಪಿಎಸ್’ ವ್ಯವಸ್ಥೆಯಾಗಿದೆ
ಕಳೆದ 50 ವರ್ಷಗಳಿಂದ ಆಮೆಗಳ ಸಂರಕ್ಷಣೆಯಲ್ಲಿ ಮೀನುಗಾರ ಬಾಬು ಮೊಗವೀರ
ಕುಂದಾಪುರದ ಮೀನುಗಾರರಾದ ಬಾಬು ಮೊಗವೀರ ಕಡಲಾಮೆಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ಸರಿಸುಮಾರು 50 ವರ್ಷಗಳಿಂದ ದುರ್ಬಲ ವರ್ಗದಲ್ಲಿರುವ ಕಡಲಾಮೆಯ ಮೊಟ್ಟೆಗಳನ್ನ ಗುರುತಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಆಮೆಗಳು ಮೊಟ್ಟೆ ಇಡುವ ಋತುವಿನಲ್ಲಿ ಮುಂಜಾನೆ 5 ಗಂಟೆಗೆ ಎದ್ದು ಕಡಲ ಕಿನಾರೆಗೆ ತೆರಳುತ್ತಾರೆ. ಆಮೆಗಳ ಹೆಜ್ಜೆ ಗುರುತಿನ ಆಧಾರದ ಮೇಲೆ ಮೊಟ್ಟೆಗಳನ್ನ ಹುಡುಕುತ್ತಾರೆ.ಇವರ ಈ ಕಾಳಜಿಗೆ ಅರಣ್ಯ ಇಲಾಖೆಯ ಕಡೆಯಿಂದ ಪ್ರಶಸ್ತಿಗಳು ಲಭಿಸಿವೆ.
ಒಟ್ಟಿನಲ್ಲಿ ಜೆಲ್ಲಿ ಫಿಶ್‌ಗಳನ್ನ ತಿಂದು ಮತ್ಸ್ಯ ಸಂಪತ್ತಿನ ಸಮತೋಲನ ಕಾಯುವಲ್ಲಿ ಪ್ರಮುಖ ಪಾತ್ರವಹಿಸಿರುವ ಆಲಿವ್ ರಿಡ್ಲ್ ಆಮೆಗಳ ಸಂರಕ್ಷಣೆ ಅಗತ್ಯ ಮತ್ತು ಅನಿವಾರ್ಯ. ಈ ನಿಟ್ಟಿನಲ್ಲಿ ಕಡಲ ತೀರದ ನಾಗರೀಕರ ಸಮಯಪ್ರಜ್ಙೆ, ಅರಣ್ಯ ಇಲಾಖೆಗಳ ಕಾರ್ಯವೈಖರಿ ಶ್ಲಾಘನೀಯ.
ಇದನ್ನೂ ಓದಿ : ಸಿಸಿಎಲ್ 2026 | ಕಿಚ್ಚನ ಪಡೆಗೆ ಭರ್ಜರಿ ಗೆಲುವು



















