ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ (ಎಸೆತಗಳ ಲೆಕ್ಕದಲ್ಲಿ) 3000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸೂರ್ಯ ಪಾತ್ರರಾಗಿದ್ದಾರೆ.
ಜನವರಿ 31ರಂದು ಇಲ್ಲಿನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮುಂಬರುವ 2026ರ ಟಿ20 ವಿಶ್ವಕಪ್‌ಗೆ ಭಾರತ ಸಜ್ಜಾಗಿದೆ ಎಂಬ ಸಂದೇಶವನ್ನು ನಾಯಕ ಸೂರ್ಯಕುಮಾರ್ ತಮ್ಮ ಬ್ಯಾಟಿಂಗ್ ಮೂಲಕ ರವಾನಿಸಿದ್ದಾರೆ.
ವಿಶ್ವದಾಖಲೆ ನಿರ್ಮಾಣ:
ತಮ್ಮ ಸ್ಫೋಟಕ ಇನ್ನಿಂಗ್ಸ್ ವೇಳೆ ಸೂರ್ಯಕುಮಾರ್ ಯಾದವ್ ಅವರು ಟಿ20 ವೃತ್ತಿಜೀವನದಲ್ಲಿ 3000 ರನ್‌ಗಳ ಗಡಿಯನ್ನು ದಾಟಿದರು. ಅವರು ಈ ಸಾಧನೆ ಮಾಡಲು ತೆಗೆದುಕೊಂಡಿದ್ದು ಕೇವಲ 1,822 ಎಸೆತಗಳನ್ನು ಮಾತ್ರ. ಈ ಮೂಲಕ ಯುಎಇ ಆಟಗಾರ ಮುಹಮ್ಮದ್ ವಸೀಮ್ (1,947 ಎಸೆತ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಕಿವೀಸ್ ವೇಗಿ ಲಾಕಿ ಫರ್ಗ್ಯೂಸನ್ ಎಸೆದ ಫುಲ್‌ಟಾಸ್ ಎಸೆತವನ್ನು ಥರ್ಡ್ ಮ್ಯಾನ್ ಕಡೆಗೆ ಬೌಂಡರಿಗಟ್ಟುವ ಮೂಲಕ ಸೂರ್ಯ ಈ ದಾಖಲೆ ಬರೆದರು.
ಇನ್ನು ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಳಿಕ ಟಿ20ಯಲ್ಲಿ 3 ಸಾವಿರ ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಸೂರ್ಯಕುಮಾರ್ ಭಾಜನರಾದರು.
ನಾಯಕನ ಆಟ:
ಕ್ರೀಸ್‌ಗೆ ಬಂದ ತಕ್ಷಣದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸೂರ್ಯ, ಕೇವಲ 30 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 63 ರನ್‌ಗಳನ್ನು ಕಲೆಹಾಕಿದರು.
ಇಶಾನ್ ಕಿಶನ್ ಚೊಚ್ಚಲ ಶತಕ:
ಒಂದೆಡೆ ಸೂರ್ಯಕುಮಾರ್ ದಾಖಲೆ ಬರೆದರೆ, ಮತ್ತೊಂದೆಡೆ ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ ತಮ್ಮ ಟಿ20 ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 43 ಎಸೆತಗಳಲ್ಲಿ 103 ರನ್ ಚಚ್ಚಿದ ಇಶಾನ್, ಕಿವೀಸ್ ಬೌಲರ್‌ಗಳನ್ನು ಹೈರಾಣಾಗಿಸಿದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ 47 ರನ್ ಗಳಿಸಿದರು.
ಈ ಮೂವರ ಬ್ಯಾಟಿಂಗ್ ಅಬ್ಬರದ ಫಲವಾಗಿ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 271 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಅಂಕಿ-ಅಂಶ: ಟಿ20ಐನಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟರ್‌ಗಳು (ಎಸೆತಗಳ ಆಧಾರದಲ್ಲಿ)
- ಸೂರ್ಯಕುಮಾರ್ ಯಾದವ್ (ಭಾರತ) – 1822 ಎಸೆತಗಳು
- ಮುಹಮ್ಮದ್ ವಸೀಮ್ (ಯುಎಇ) – 1947 ಎಸೆತಗಳು
- ಜೋಸ್ ಬಟ್ಲರ್ (ಇಂಗ್ಲೆಂಡ್) – 2068 ಎಸೆತಗಳು
- ಆರೋನ್ ಫಿಂಚ್ (ಆಸ್ಟ್ರೇಲಿಯಾ) – 2077 ಎಸೆತಗಳು
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) – 2113 ಎಸೆತಗಳು
ಇದನ್ನೂ ಓದಿ: ಬಾಂಗ್ಲಾ ಪರ ನಿಂತು ವಿಶ್ವಕಪ್‌ಗೆ ಪಾಕ್ ಬೆದರಿಕೆ ಹಾಕಿದ್ದೇಕೆ? ಕೊನೆಗೂ ‘ಬಾಲ ಮುದುರಿ’ ಲಂಕೆಗೆ ಹೋಗುವುದೇಕೆ?



















