ಬೆಂಗಳೂರು | ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣ ಯಾವತ್ತೂ ಮರೆಯೋಕಾಗಲ್ಲ, ಮಿಸ್ ಯು ರಾಯ್ ಸರ್ ಎಂದು ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ನೆನೆದು ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ ಭಾವುಕರಾಗಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಿಸಿರುವ ಹನುಮಂತ, ಅಂದು ಸರಿಗಮಪ ಸೀಸನ್ 12ರಲ್ಲಿ ನಾನು ರನ್ನರ್ ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್ ಸೀಸನ್ 11ರಲ್ಲಿ ನಾನು ಗೆದ್ದಾಗ ನನಗೆ ಪ್ರೀತಿಯಿಂದ ಹಣ ಕೊಡುವುದರ ಮೂಲಕ ಸಂಭ್ರಮಿಸಿದ್ದೀರಿ. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಬರೆದುಕೊಂಡಿದ್ದಾರೆ.
ಸಿಜೆ ರಾಯ್ ಅವರು ಸರಿಗಮಪ ಸೀಸನ್ 12ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ಹಣ ನೀಡಿದ್ದರು. ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿಯೂ ಗೆದ್ದಾಗ ಕೂಡ ಅವರೇ ಗೆದ್ದ ಹಣವನ್ನು ನೀಡಿದ್ದರು. ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಣವನ್ನು ನೀಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಿನ್ನೆಲೆ |
ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಐಟಿ ಅಧಿಕಾರಿಗಳ ವಿರುದ್ಧ ಆರೋಪಗಳನ್ನು ದೂರಿನಲ್ಲಿ ಮಾಡಿಲ್ಲ. ಆದ್ದರಿಂದ ನಾವು ಅಸಹಜ ಮರಣ ಪ್ರಕರಣವನ್ನು ದಾಖಲಿಸಿದ್ದೇವೆ. ಕುಟುಂಬದವರು ಹೊಸ ಆರೋಪಗಳನ್ನು ಮಾಡಿದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಅವರ ಸಹಾಯಕರೊಬ್ಬರು, ಇಷ್ಟು ವರ್ಷಗಳ ಕಾಲ ರಾಯ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಅವರು ದುರ್ಬಲ ಮನಸ್ಸಿನವರಾಗಿ ಎಂದಿಗೂ ಕಾಣಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಡುವುದಿಲ್ಲ “ಚಿಲ್ಲರೆ’’ ಸಮಸ್ಯೆ | ಎಟಿಎಂಗಳಲ್ಲೂ ಸಿಗಲಿವೆ 10, 20, 50 ರೂ. ನೋಟುಗಳು



















