ಚಿಕ್ಕಮಗಳೂರು: ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದೆ. ಕೆಮ್ಮಣ್ಣುಗುಂಡಿಯ ಜಂಗಲ್ ರೆಸಾರ್ಟ್‌ನಿಂದ ಹೆಬ್ಬೆ ಪಾಲ್ಸ್‌ಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಅರಣ್ಯ ರಸ್ತೆಯಲ್ಲಿ ಅಚ್ಚರಿಯಾಗಿ ಹುಲಿ ಪ್ರತ್ಯಕ್ಷವಾಗಿದೆ.
ಈ ಘಟನೆ ಭದ್ರಾ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು, ಕೆಮ್ಮಣ್ಣುಗುಂಡಿ–ಹೆಬ್ಬೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹುಲಿಯನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರವಾಸಿಗರಲ್ಲಿ ಕುತೂಹಲ ಹಾಗೂ ಆತಂಕ ಎರಡನ್ನೂ ಮೂಡಿಸಿದೆ.
ಇದೇ ಹುಲಿ ತಣಿಗೆಬೈಲು ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವುದು ದೃಢಪಟ್ಟಿದ್ದು, ಕಳೆದ ಒಂದು ವಾರದ ಹಿಂದೆ ಚಂದ್ರದ್ರೋಣ ಪರ್ವತ ಸಾಲಿನಲ್ಲೂ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಕೆಮ್ಮಣ್ಣುಗುಂಡಿ–ಹೆಬ್ಬೆ ಮಾರ್ಗದಲ್ಲಿ ಸಂಚಾರಿಸುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ : ಚಾ.ನಗರದಲ್ಲಿ ವ್ಯಕ್ತಿಯ ಮೇಲೆ ಚಿರತೆ ದಾಳಿ | ಧೈರ್ಯದಿಂದ ಪ್ರತಿರೋಧ ತೋರಿ ಪ್ರಾಣಾಪಾಯದಿಂದ ಪಾರು!



















