ನವದೆಹಲಿ: ಭಾರತದ ಮೊದಲ ಮಾನವ ಸಹಿತ ‘ಗಗನಯಾನ’ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಮಾನವರಹಿತ ಮಿಷನ್ (G1) ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಸಂಬಂಧ ಇಸ್ರೋ ಮಹತ್ವದ ಅಪ್‌ಡೇಟ್ ನೀಡಿದ್ದು, ಮಾನವ ಸಂಚಾರಕ್ಕೆ ಪೂರಕವಾದ ರಾಕೆಟ್ ಇಂಜಿನ್‌ಗಳ ಎಲ್ಲಾ ಪ್ರೊಪಲ್ಷನ್ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ತಿಳಿಸಿದೆ.

8,000 ಪರೀಕ್ಷೆಗಳ ಮೈಲಿಗಲ್ಲು
ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಮುನ್ನ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈವರೆಗೆ 8,000ಕ್ಕೂ ಹೆಚ್ಚು ನೆಲಮಟ್ಟದ (Ground Tests) ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ ರಚನಾತ್ಮಕ ಸಾಮರ್ಥ್ಯ, ಸಾಫ್ಟ್‌ವೇರ್ ಸಿಮ್ಯುಲೇಶನ್ ಮತ್ತು ಪರಿಸರ ಪರೀಕ್ಷೆಗಳು ಸೇರಿವೆ. ಯಾವುದೇ ರೀತಿಯ ವಿನ್ಯಾಸದ ಲೋಪದೋಷಗಳು ಇರದಂತೆ ನೋಡಿಕೊಳ್ಳಲು ‘ಇಂಟಿಗ್ರೇಟೆಡ್ ಮಿಷನ್ ರಿವ್ಯೂ ಕಮಿಟಿ’ಯನ್ನು ರಚಿಸಲಾಗಿದ್ದು, ಈ ಸಮಿತಿಯು ಪ್ರತಿಯೊಂದು ಹಂತವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ಬಾಹ್ಯಾಕಾಶಕ್ಕೆ ನೆಗೆಯಲಿದೆ ‘ವ್ಯೋಮಮಿತ್ರ’
ಮುಂಬರುವ ಮಾರ್ಚ್ 2026ರಲ್ಲಿ ಗಗನಯಾನದ ಮೊದಲ ಹಂತದ (G1) ಉಡಾವಣೆ ನಡೆಯುವ ಸಾಧ್ಯತೆಯಿದೆ. ಈ ಮೊದಲ ಪ್ರಯೋಗದಲ್ಲಿ ಮಾನವರ ಬದಲಾಗಿ ‘ವ್ಯೋಮಮಿತ್ರ’ ಎಂಬ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಭೂಮಿಯಿಂದ ಸುಮಾರು 400 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಮೂರು ದಿನಗಳ ಕಾಲ ಸಂಚರಿಸಲಿರುವ ಈ ನೌಕೆಯು, ಅಲ್ಲಿನ ಜೀವ ರಕ್ಷಕ ವ್ಯವಸ್ಥೆಗಳು, ಮರು-ಪ್ರವೇಶ (Re-entry) ಮತ್ತು ಸಮುದ್ರದಲ್ಲಿ ನೌಕೆಯನ್ನು ಮರಳಿ ಪಡೆಯುವ ಪ್ರಕ್ರಿಯೆಗಳನ್ನು ಪರೀಕ್ಷಿಸಲಿದೆ.
2027ರಲ್ಲಿ ಗಗನಯಾನಿಗಳ ಐತಿಹಾಸಿಕ ಪಯಣ
ಯೋಜನೆಯ ಪ್ರಕಾರ, 2026ರ ಅಂತ್ಯದ ವೇಳೆಗೆ ಎರಡನೇ ಮಾನವರಹಿತ ಮಿಷನ್ (G2) ನಡೆಯಲಿದೆ. ಈ ಎರಡೂ ಪ್ರಯೋಗಗಳು ಯಶಸ್ವಿಯಾದ ನಂತರ, 2027ರಲ್ಲಿ ಭಾರತದ ನಾಲ್ವರು ಗಗನಯಾನಿಗಳಾದ ಶುಭಾಂಶು ಶುಕ್ಲಾ, ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್ ಮತ್ತು ಅಂಗದ್ ಪ್ರತಾಪ್ ಅವರು ಬಾಹ್ಯಾಕಾಶಕ್ಕೆ ನೆಗೆಯಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ತಾಂತ್ರಿಕ ಸವಾಲುಗಳಿಂದ ವಿಳಂಬವಾಗಿದ್ದ ಈ ಯೋಜನೆಯು ಈಗ ವೇಗ ಪಡೆದುಕೊಂಡಿದ್ದು, ಈ ಮೂಲಕ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಂಡ ವಿಶ್ವದ ಆಯ್ದ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರ್ಪಡೆಯಾಗಲಿದೆ.
ಇದನ್ನೂ ಓದಿ : ಚೀನಾ ಸದ್ದಡಗಿಸಲು ಅಮೆರಿಕ ಮಾಸ್ಟರ್ ಪ್ಲಾನ್ | ಫೆಬ್ರವರಿಯಲ್ಲಿ ಭಾರತದ ಕುರಿತು ವಾಷಿಂಗ್ಟನ್‌ನಲ್ಲಿ ಮಹತ್ವದ ಸಭೆ



















