ಬೆಂಗಳೂರು: ದೇಶದಲ್ಲಿ ಬಡವರ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆಯಬೇಕು, ಅವರಿಗೆ ಆರ್ಥಿಕವಾಗಿ ನೆರವಾಗಬೇಕು ಎಂಬ ಕಾರಣದಿಂದಾಗಿ ಕೇಂದ್ರ ಸರ್ಕಾರವು ಪಿಎಂ ವಿದ್ಯಾಲಕ್ಷ್ಮಿ (PM Vidyalaxmi) ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿಗೆ ಸಾಲ ನೀಡಲಾಗುತ್ತದೆ. ಹಾಗಾಗಿ, ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಏನೆಲ್ಲ ಇವೆ ಪ್ರಯೋಜನ?
ದೇಶದ ಪ್ರಮುಖ 860ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (QHEI) ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ ಮತ್ತು ಇತರ ವೆಚ್ಚಗಳನ್ನು ಭರಿಸಲು ಸಾಲ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ, ಅವರಿಗೆ 10 ಲಕ್ಷ ರೂಪಾಯಿವರೆಗೆ ಸಾಲದ ಮೇಲೆ 3% ಬಡ್ಡಿ ರಿಯಾಯಿತಿ ಸಿಗುತ್ತದೆ.
ವಾರ್ಷಿಕ ಆದಾಯ 4.5 ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗೆ ಶಿಕ್ಷಣದ ಅವಧಿಯಲ್ಲಿ ಪೂರ್ಣ ಬಡ್ಡಿ ಸಬ್ಸಿಡಿ (100%) ದೊರೆಯುತ್ತದೆ. 7.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಕೇಂದ್ರ ಸರ್ಕಾರವೇ 75% ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ. ಹಾಗಾಗಿ ಯಾವುದೇ ಆಸ್ತಿ ಅಡಮಾನ ಅಥವಾ ಗ್ಯಾರಂಟರ್ ಅಗತ್ಯವಿಲ್ಲ.
ಅರ್ಹತೆಗಳು ಏನೇನು?
ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು. ನಿಗದಿಪಡಿಸಿದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (NIRF ಟಾಪ್ ಶ್ರೇಯಾಂಕಿತ) ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದಿರಬೇಕು. ಮ್ಯಾನೇಜ್ ಮೆಂಟ್ ಕೋಟಾದಡಿ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಲ್ಲ ಎಂದು ಸರ್ಕಾರ ತಿಳಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ?
• ಅಧಿಕೃತ PM Vidyalaxmi Portal ಆಗಿರುವ pmvidyalaxmi.co.in ಗೆ ಭೇಟಿ ನೀಡಿ.
• ‘New User Registration’ ಮೂಲಕ ನಿಮ್ಮ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಿ.
• ಲಾಗಿನ್ ಆದ ನಂತರ ‘Common Education Loan Application Form’ (CELAF) ಅನ್ನು ಭರ್ತಿ ಮಾಡಿ.
• ನಿಮ್ಮ ಆಯ್ಕೆಯ ಬ್ಯಾಂಕ್ ಮತ್ತು ಸಾಲದ ಯೋಜನೆಯನ್ನು ಆರಿಸಿ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
• ಬಡ್ಡಿ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವವರು JanSamarth Portal ಮೂಲಕವೂ ಪ್ರಕ್ರಿಯೆ ಆರಂಭಿಸಬಹುದು.
ಇದನ್ನೂ ಓದಿ: SBIನಲ್ಲಿ 2,273 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ



















