ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಬಹಿರಂಗವಾಗಿ ಸಮರ ಸಾರಿದೆ. ಕಳೆದ ಮೂರು ವರ್ಷಗಳಿಂದ ಪೂರ್ಣಗೊಂಡಿರುವ ಕಾಮಗಾರಿಗಳ ಸುಮಾರು 36 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಪಾವತಿಸದ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲು ಗುತ್ತಿಗೆದಾರರ ಸಂಘ ನಿರ್ಧರಿಸಿದೆ. ಡಿಸೆಂಬರ್ ವರೆಗೆ ನೀಡಿದ್ದ ಗಡುವು ಮುಗಿದರೂ ಬಿಡಿಗಾಸು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಮಂಜುನಾಥ್ ಅವರು, ನಾವು ಸಿಎಂ, ಸಿಎಸ್, ಸಚಿವರು ಸೇರಿ ಎಲ್ಲರಿಗೂ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ನಮಗೆ ಯಾವುದೇ ಪ್ರಯೋಜನ ಆಗಿಲ್ಲ. ದಿವಂಗತ ಕೆಂಪಣ್ಣ ಅವರನ್ನು ಎಲ್ಲರೂ ರಾಜಕೀಯವಾಗಿ ಬಳಸಿಕೊಂಡರು. ಈಗಾಗಲೇ ನಮ್ಮ ಸಮಸ್ಯೆಗಳ ಕುರಿತಾಗಿ 100 ಪುಟಗಳ ದಾಖಲೆ ಸರ್ಕಾರಕ್ಕೆ ಕೊಟ್ಟಿದ್ದೇವೆ. ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಪರದಾಟ ಅನುಭವಿಸಿದ್ದೇವೆ ಎಂದು ಹೇಳಿದ್ದಾರೆ.
ಒಂದೇ ಬಾರಿ ಬಿಲ್ ಕ್ಲಿಯರ್ ಮಾಡುವ ಬದಲು ಹಂತ ಹಂತವಾಗಿ ಮಾಡಲಿ, ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಎಲ್ಲಾ ಕಾಲದಲ್ಲೂ ಸಹಕರಿಸಿದ್ದೇವೆ. ಅಷ್ಟೋ ಇಷ್ಟೋ ಸಹಕಾರ ಮಾಡುತ್ತಿರುವ ಸಚಿವರು ಸತೀಶ್ ಜಾರಕಿಹೊಳಿ ಏನೇ ಮನವಿ ಮಾಡಿದರೂ ಆರ್ಥಿಕ ಇಲಾಖೆಯತ್ತ ಕೈ ತೋರಿಸುತ್ತಾರೆ. ಈ ವಿಚಾರವಗಿ ಚಿಕ್ಕಬಳ್ಳಾಪುರದಲ್ಲಿ ಗುತ್ತಿಗೆದಾರನೊಬ್ಬ ಮುನೇಗೌಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಮ್ಮ ಜೊತೆ ಇದುವರೆಗೂ ಸಿಎಂ ಅಧಿಕೃತ ಸಭೆ ಮಾಡಿಲ್ಲ. ನಾವು ಮಾತನಾಡಲು ಹೋದಾಗ ಬರೀ ದುಡ್ಡು ಕೇಳುತ್ತೀರಾ ಎಂದು ಹೇಳುತ್ತಾರೆ. ಹಾಗಾಗಿ, ನಮ್ಮ ಎಲ್ಲಾ ಗುತ್ತಿಗೆದಾರರು ಸಿಎಂ ಜೊತೆ ಸಭೆ ಮಾಡಿಸಿ ಎಂದು ಕೇಳುತ್ತಿದ್ದಾರೆ. ಈ ಹಿಂದೆ ಕೂಡ ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೇವೆ.
ಇನ್ನೂ, ಸಚಿವರ ಅನುಕೂಲಕ್ಕೆ ತಕ್ಕಂತೆ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಯಾವೊಬ್ಬ ಗುತ್ತಿಗೆದಾರರೂ ಪ್ರಯೋಜನ ಪಡೆಯುತ್ತಿಲ್ಲ. ಚೀಫ್ ಇಂಜಿನಿಯರ್‌ಗಳನ್ನು ಖಾಸಗಿ ಕಚೇರಿಗಳಿಗೆ ಕರೆಸಿಕೊಂಡು ಟೆಂಡರ್ ಹಂಚಿಕೆ ಮಾಡುತ್ತಾರೆ. ಆರ್‌ಟಿ ನಗರ ಮತ್ತು ರಾಜಾಜಿನಗರ ಖಾಸಗಿ ಜಾಗದಲ್ಲಿ ಈ ರೀತಿ ನಡೆಯುತ್ತಿದೆ. ನಗರಾಭಿವೃದ್ದಿ ಇಲಾಖೆಯಲ್ಲಿ ಈ ರೀತಿ ವಿಪರ್ಯಾಸ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿಕೆಶಿ ಅವರು ಕನಿಷ್ಠ ನಮ್ಮ ಮನವಿಯನ್ನು ಕೇಳುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರ ಗಮನಕ್ಕೂ ಈ ವಿಚಾರ ತರುತ್ತೇವೆ. ಮಾನ್ಯ ಮುಖ್ಯಮಂತ್ರಿ ಅವರು ಸಭೆ ಕರೆದು ಮಾತನಾಡದೇ ಇದ್ದರೆ, ಮಾರ್ಚ್ 5ರಿಂದ ಎಲ್ಲಾ ಇಲಾಖೆಗಳ ಕಾಮಗಾರಿ ಸ್ಥಗಿತ ಮಾಡುತ್ತೇವೆ. ನಮ್ಮ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ನಮ್ಮನ್ನು ಕೆಣಕಲು ಹೋಗಬೇಡಿ, ಈ ಸರ್ಕಾರದಲ್ಲಿ ಪರ್ಸಂಟೇಜ್ ಜಾಸ್ತಿ ಆಗಿರೋದು ನಿಜ, ಹಣ ಬಿಡುಗಡೆ ವಿಚಾರದಲ್ಲಿ ಪರ್ಸೆಂಟೇಜ್ ಹೆಚ್ಚಾಗಿದೆ. ಅದು ಎಷ್ಟು ಏನು ಅಂತ ದಯಮಾಡಿ ಕೇಳಬೇಡಿ. ಕೆಂಪಣ್ಣ ಅವರು 40% ಅಂತ ಹೇಳಿ ಭಾರೀ ಡ್ಯಾಮೇಜ್ ಮಾಡಿದ್ದರು, ನಿಮ್ಮ ಸಹಾಯ ಇದ್ದರೆ, ದಯಮಾಡಿ ಅದನ್ನು ಕಡಿಮೆ ಮಾಡಿಸಿ ಎಂದು ಹೇಳಿದ್ದಾರೆ.
ಕೆಲ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗಿದೆ. ಮಧ್ಯವರ್ತಿಗಳ ಮೂಲಕ ಕೆಲ ಸಚಿವರು ವ್ಯವಹಾರ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಗುತ್ತಿಗೆದಾರರ ಮೇಲೆ ದರ್ಪ ಮೆರೆಯುತ್ತಿದ್ದಾರೆ. ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ಗುತ್ತಿಗೆದಾರರ ಪಾಡು ಹೀನಾಯವಾಗಿದೆ. ಮಾರ್ಚ್ 5 ರಂದು ಎಲ್ಲರ ಬಂಡವಾಳ ಬಿಚ್ಚಿಡುತ್ತೇವೆ. ನಮ್ಮ ಜೊತೆಗೆ ಸಭೆ ಕರೆಯದೆ ಇದ್ದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುತ್ತಿಗೆದಾರರಿಗೆ ಬಿಡುಗಡೆ ಆಗಬೇಕಿರುವ ಹಣ
ಜಲಸಂಪನ್ಮೂಲ ಇಲಾಖೆ 13,000
ಲೋಕೋಪಯೋಗಿ ಇಲಾಖೆ 8,370
RDPR 3,800
ಸಣ್ಣ ನೀರಾವರಿ 3,000
ನಗರಾಭಿವೃದ್ದಿ ಇಲಾಖೆ 2,000
ವಸತಿ ಮತ್ತು ವಕ್ಫ್ 2,600
ಕಾರ್ಮಿಕ ಇಲಾಖೆ 2,000
GBA 2,600
ಒಟ್ಟು – 37,370 ಕೋಟಿ ರೂ.
ಇದನ್ನೂ ಓದಿ:ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ಆಕ್ಸಿಡೆಂಟ್ | ಇಬ್ಬರು ಸಾವು



















