ಉಡುಪಿ : ಉಡುಪಿ ಜಿಲ್ಲೆಯ ಕೋಟ ಸಮೀಪದ ಸಾಸ್ತಾನ ಟೋಲ್ ಗೇಟ್‌ನಲ್ಲಿ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರಿಗೆ ಅವಮಾನ ನಡೆದ ಪ್ರಕರಣದಲ್ಲಿ, ಟೋಲ್ ಸಿಬ್ಬಂದಿಗಳು ಕ್ಷಮೆ ಕೇಳಿದ್ದಾರೆ. ನಿನ್ನೆ ರಾತ್ರಿ ನಡೆದ ಈ ಘಟನೆ ವೇಳೆ ಯೋಧರಿಗೆ ಇರುವ ಟೋಲ್ ವಿನಾಯಿತಿಯನ್ನು ನೀಡದೆ ಸಿಬ್ಬಂದಿಗಳು ವರ್ತಿಸಿದ್ದು, ಇದರಿಂದ ಬೇಸರಗೊಂಡ ಶ್ಯಾಮರಾಜ್ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗಣರಾಜ್ಯೋತ್ಸವ ದಿನವೇ ಯೋಧರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದೊಂದಿಗೆ ಈ ವಿಡಿಯೋ ವೈರಲ್ ಆಗಿತ್ತು.
ಕಾಸರಗೋಡಿನ ಶ್ಯಾಮರಾಜ್ ಅವರು ವೀಲ್ ಚೇರ್ ಅವಲಂಬಿಸಿ ಜೀವನ ನಡೆಸುತ್ತಿರುವ ಯೋಧರಾಗಿದ್ದು, ದುರಂತವೊಂದರಲ್ಲಿ ಸೇನಾ ವಾಹನ 400 ಅಡಿಗೆ ಬಿದ್ದಾಗ ಪವಾಡ ಸದೃಶ್ಯವಾಗಿ ಬದುಕುಳಿದವರು. ಯೋಧರಿಗೆ ಟೋಲ್ ಗೇಟ್‌ನಲ್ಲಿ ವಿನಾಯಿತಿ ಇರುವುದಾದರೂ, ಮಾಹಿತಿ ಕೊರತೆಯಿಂದ ಗೊಂದಲ ಉಂಟಾಯಿತು ಎಂದು ಟೋಲ್ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇರಲಿಲ್ಲ, ಮೇಲಾಧಿಕಾರಿಗಳಿಗೆ ವಿವರ ಕಳುಹಿಸಿದ್ದೆ, ಖಚಿತಪಡಿಸುವುದು ತಡವಾದ ಕಾರಣ ಗೊಂದಲವಾಯಿತು. ಸ್ಥಳದಲ್ಲೇ ಯೋಧರ ಕ್ಷಮೆ ಕೇಳಿದ್ದೇನೆ, ಇದೀಗ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕ್ತೇವೆ.. ಎಲ್ಲಾ MLA, MLCಗಳು ಬರಬೇಕು | ಡಿ.ಕೆ ಶಿವಕುಮಾರ್ ಕರೆ



















