ರಾಯಚೂರು | ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಮತ್ತು ಎರಡು ಪಿಕ್‌ಅಪ್ (ಬೊಲೆರೋ) ವಾಹನಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರು ಆಂಧ್ರಪ್ರದೇಶದ ಚಲ್ಲೆಕೂಡ್ಲೂರು ಗ್ರಾಮದವರು ಎಂದು ಗುರುತಿಸಲಾಗಿದೆ. ಯಲ್ಲಪ್ಪ (44), ಹರಿ (24), ರಂಗನಾಥ (12), ಬಸವರಾಜ (37) ಹಾಗೂ ಮತ್ತೊಬ್ಬರ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಮೃತಪಟ್ಟವರು ಬಾಗಲಕೋಟೆ ಜಿಲ್ಲೆಯ ಕುರಿ ಸಂತೆಯಲ್ಲಿ ಕುರಿಗಳನ್ನು ಖರೀದಿ ಮಾಡಿ, ಎರಡು ಪಿಕ್‌ಅಪ್ ವಾಹನಗಳಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಸಿಂಧನೂರಿನಿಂದ ಬಳ್ಳಾರಿ ಕಡೆಗೆ ಈ ವಾಹನಗಳು ಒಂದರ ಹಿಂದೆ ಒಂದರಂತೆ ಚಲಿಸುತ್ತಿದ್ದವು. ಈ ವೇಳೆ ಎದುರುಗಡೆಯಿಂದ ಬಂದ ಲಾರಿ ಎರಡೂ ಪಿಕ್‌ಅಪ್ ವಾಹನಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಎರಡು ಪಿಕ್‌ಅಪ್ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ. ವಾಹನದಲ್ಲಿದ್ದ ಹಲವಾರು ಕುರಿಗಳು ಸಹ ಅಪಘಾತದಲ್ಲಿ ಮೃತಪಟ್ಟಿವೆ. ಒಟ್ಟು ಎಂಟು ಜನ ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದು, ಐವರು ಜೀವ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ GBA ಚುನಾವಣೆಗೆ ಉಸ್ತುವಾರಿಗಳನ್ನ ನೇಮಿಸಿದ ಬಿಜೆಪಿ ನೂತನ ಅಧ್ಯಕ್ಷ ನಿತಿನ್ ನಬಿನ್!



















