ಮುಂಬೈ: ದೇಶದ ಕೀರ್ತಿ ಪತಾಕೆ ಹಾರಿಸಬೇಕಾದ ರಾಷ್ಟ್ರಮಟ್ಟದ ಕ್ರೀಡಾಪಟುಗಳು ರೈಲ್ವೆ ಅಧಿಕಾರಿಯೊಬ್ಬರ ಬೇಜವಾಬ್ದಾರಿಯಿಂದಾಗಿ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಪರದಾಡಿದ ಘಟನೆ ಮಹಾರಾಷ್ಟ್ರದ ಪನ್ವೇಲ್‌ನಲ್ಲಿ ನಡೆದಿದೆ. ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ದೇವ್ ಮೀನಾ ಮತ್ತು ಸಹ ಕ್ರೀಡಾಪಟು ಕುಲದೀಪ್ ಯಾದವ್ ಅವರನ್ನು ರೈಲ್ವೆ ಟಿಕೆಟ್ ಪರೀಕ್ಷಕರು (TTE) ಅರ್ಧದಲ್ಲೇ ರೈಲಿನಿಂದ ಕೆಳಗಿಳಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮುಳುವಾದ ಕ್ರೀಡಾ ಪರಿಕರಗಳು
ಅಖಿಲ ಭಾರತ ಅಂತರ್-ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್ ಮುಗಿಸಿಕೊಂಡು ಮರಳುತ್ತಿದ್ದ ಈ ಕ್ರೀಡಾಪಟುಗಳ “ತಪ್ಪು” ಏನೆಂದರೆ, ಅವರು ತಮ್ಮ ಕ್ರೀಡೆಗೆ ಅತ್ಯಗತ್ಯವಾದ ‘ಪೋಲ್’ಗಳನ್ನು (ಕಂಬಗಳನ್ನು) ಜೊತೆಯಲ್ಲಿ ಹೊತ್ತೊಯ್ಯುತ್ತಿದ್ದರು. ರೈಲಿನಲ್ಲಿ ಇವುಗಳನ್ನು ಕೊಂಡೊಯ್ಯಲು ಅನುಮತಿ ಇಲ್ಲ ಎಂದು ವಾದಿಸಿದ ಟಿಟಿಇ, ಪನ್ವೇಲ್ ನಿಲ್ದಾಣದಲ್ಲಿ ಅವರನ್ನು ಬಲವಂತವಾಗಿ ಇಳಿಸಿದ್ದಾರೆ. ತಮ್ಮ ಕ್ರೀಡಾ ಸಾಧನೆ ಮತ್ತು ಪರಿಕರಗಳ ಪ್ರಾಮುಖ್ಯತೆಯ ಬಗ್ಗೆ ಅಧಿಕಾರಿಗಳಿಗೆ ವಿವರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ, ಸುಮಾರು ಐದು ಗಂಟೆಗಳ ಕಾಲ ಇಬ್ಬರೂ ಕ್ರೀಡಾಪಟುಗಳು ನಿಲ್ದಾಣದಲ್ಲೇ ಬಾಕಿ ಉಳಿಯಬೇಕಾಯಿತು.
ಈ ಘಟನೆಯ ನಂತರ ವಿಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿರುವ ದೇವ್ ಮೀನಾ, “ನನ್ನಂತಹ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಿಗೇ ಇಂತಹ ಪರಿಸ್ಥಿತಿ ಎದುರಾದರೆ, ಇನ್ನು ಕ್ರೀಡೆಗೆ ಹೊಸದಾಗಿ ಸೇರುವ ಜೂನಿಯರ್ ಅಥ್ಲೀಟ್‌ಗಳ ಗತಿ ಏನು?” ಎಂದು ಪ್ರಶ್ನಿಸಿದ್ದಾರೆ. ಪೋಲ್ ವಾಲ್ಟ್ ಕ್ರೀಡೆಯಲ್ಲಿ ಅಥ್ಲೀಟ್‌ಗಳಿಗೆ ಕ್ರೀಡಾಂಗಣದ ಸವಾಲಿಗಿಂತ ಹೆಚ್ಚಾಗಿ, ಇಂತಹ ಭಾರೀ ಗಾತ್ರದ ಪರಿಕರಗಳೊಂದಿಗೆ ಪ್ರಯಾಣಿಸುವುದೇ ದೊಡ್ಡ ಸಾಹಸವಾಗಿ ಪರಿಣಮಿಸಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಯಾರು ಈ ದೇವ್ ಮೀನಾ?
ಮಧ್ಯಪ್ರದೇಶ ಮೂಲದ ದೇವ್ ಮೀನಾ ಭಾರತದ ಭರವಸೆಯ ಕ್ರೀಡಾಪಟು. 2025ರ ಏಪ್ರಿಲ್‌ನಲ್ಲಿ ನಡೆದ ನ್ಯಾಷನಲ್ ಫೆಡರೇಶನ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5.35 ಮೀಟರ್ ಎತ್ತರ ಜಿಗಿಯುವ ಮೂಲಕ ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಕೇವಲ 19ನೇ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿರುವ ದೇವ್, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇಂತಹ ಪ್ರತಿಭಾವಂತ ಕ್ರೀಡಾಪಟುವಿಗೆ ಇಲಾಖೆಯು ನೀಡಿದ ಈ ನಡವಳಿಕೆಯು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಈಡಾಗಿದೆ.
ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಕಸದ ಗೂಡು | ನಾಗರಿಕ ಪ್ರಜ್ಞೆ ಬಗ್ಗೆ ಆಕ್ರೋಶ



















