ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗುತ್ತಲೇ ಇರುತ್ತದೆ. ಮನೆ ಬಾಡಿಗೆ, ಇಎಂಐ, ಮಕ್ಕಳ ಸ್ಕೂಲ್ ಫೀಸ್ ಅಂತ ಹತ್ತಾರು ಖರ್ಚುಗಳು ಬರುತ್ತವೆ. ಸ್ಯಾಲರಿದ ಬಂದ 2-3 ದಿನದಲ್ಲೇ ಖಾತೆ ಖಾಲಿಯಾಗುತ್ತದೆ. ನಗರಗಳಲ್ಲಿ ವಾಸಿಸುವ ಬಹುತೇಕರ ಅಳಲು ಇದು. ಆದರೆ, ಬರುವ ಸಂಬಳದಲ್ಲಿಯೇ ಪ್ಲಾನ್ ಮಾಡಿದರೆ ಯಾವುದೇ ದುಗುಡವಿಲ್ಲದೆ ಜೀವನ ಸಾಗಿಸಬಹುದಾಗಿದೆ. ಅದಕ್ಕೆ ನೀವು 70/10/10/10 ಅಳವಡಿಸಿಕೊಂಡರೆ ಸಾಕು ಎನ್ನುತ್ತಾರೆ ತಜ್ಞರು.
ಹೌದು, 70/10/10/10 ಸೂತ್ರದ ಮೂಲಕ ಯಾವುದೇ ಚಿಂತೆ ಇಲ್ಲದೆ ಜೀವನ ಸಾಗಿಸಬಹುದಾಗಿದೆ. ಇಲ್ಲಿ 70 ಅಂದರೆ, ನಿಮ್ಮ ಸಂಬಳದ ಶೇ.70ರಷ್ಟು ಹಣವನ್ನು ಪ್ರತಿ ತಿಂಗಳ ಖರ್ಚಿಗಾಗಿ ಬಳಸಬೇಕು. ಅಂದರೆ, ಮನೆ ಬಾಡಿಗೆ, ದಿನಸಿ, ಇಎಂಐ, ಪೆಟ್ರೋಲ್ ಸೇರಿ ಒಂದು ತಿಂಗಳಿಗೆ ಎಷ್ಟು ಖರ್ಚಾಗುತ್ತದೆಯೋ, ಅದನ್ನು ಈ ಶೇ.70ರಷ್ಟು ಮೊತ್ತದಲ್ಲಿಯೇ ನಿರ್ವಹಿಸಬೇಕು.
ಇನ್ನು, 10 ಎಂದರೆ, ಸಂಬಳದ ಒಟ್ಟು ಮೊತ್ತದಲ್ಲಿ ಶೇ.10ರಷ್ಟು ಹಣವನ್ನು ದೀರ್ಘಾವಧಿ ಹೂಡಿಕೆಗಾಗಿ ಮೀಸಲಿಡಬೇಕು. ನಿಮಗೆ 50 ಸಾವಿರ ರೂ. ಸಂಬಳ ಇದ್ದರೆ, 5 ಸಾವಿರ ರೂಪಾಯಿಯನ್ನು ದೀರ್ಘಾವಧಿ ಹೂಡಿಕೆಗೆ ಮೀಸಲಿಡಬೇಕು. ಇದರಿಂದ ಭವಿಷ್ಯದಲ್ಲಿ ನಿಮಗೆ ಭಾರಿ ಅನುಕೂಲವಾಗುತ್ತದೆ.
ಅದೇ ರೀತಿ, ಇನ್ನೊಂದು 10 ಅಂದರೆ, ಅಲ್ಪಾವಧಿಗಾಗಿ ಹೂಡಿಕೆ ಮಾಡಬೇಕು. ಅಂದರೆ, 5 ವರ್ಷದಲ್ಲಿ ಕಾರು ಖರೀದಿಸಬೇಕು, ಮನೆ ಖರೀದಿಗಾಗಿ ಡೌನ್ ಪೇಮೆಂಟ್ ಹೊಂದಿಸಬೇಕು ಎನ್ನುವವರು ಶೇ.10ರಷ್ಟು ಹಣವನ್ನು ಅಲ್ಪಾವಧಿಗೆ ಹೂಡಿಕೆ ಮಾಡಬೇಕು. ಇನ್ನು, ಉಳಿದ 10 ಅಂದರೆ, ಶೇ.10ರಷ್ಟು ಹಣವನ್ನು ಹೊಸ ಕೌಶಲ ಕಲಿಯಲು ಬಳಸಿಕೊಳ್ಳಬೇಕು.
ಉದಾಹರಣೆಗೆ, ನೀವು ಐಟಿ ಉದ್ಯೋಗಿಯಾಗಿದ್ದರೆ, ನಿಮ್ಮ ಸಂಬಳದ ಶೇ.10ರಷ್ಟು ಮೊತ್ತವನ್ನು ಎಐ, ಹೊಸ ಕೌಶಲ, ಕೋರ್ಸ್ ಕಲಿಯಲು ಬಳಸಬೇಕು. ಇದು ನಿಮ್ಮ ಉದ್ಯೋಗವನ್ನು ಗಟ್ಟಿಗೊಳಿಸುವ ಜತೆಗೆ, ಸಂಬಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಹೀಗೆ 70/10/10/10 ಪಾಲಿಸುವ ಮೂಲಕ ನಿರುಮ್ಮಳವಾದ ಜೀವನ ಸಾಗಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ : ಉಪನಿಷತ್‌ನಲ್ಲಿಯೇ ಕಾಶಿ ಉಲ್ಲೇಖವಿದೆ, ದೇಗುಲದ ಗೋಡೆಗಳ ಮೇಲೆ ಇತಿಹಾಸವಿದೆ | ಡಾ.ಮೀನಾಕ್ಷಿ ಜೈನ್


















