ಜಮ್ಮು: ಭೂಲೋಕದ ಸ್ವರ್ಗ ಜಮ್ಮು-ಕಾಶ್ಮೀರವು ದಾಖಲೆ ಮಟ್ಟದ ಚಳಿಗೆ ನಡುಗುತ್ತಿದ್ದು, ಮೈಯನ್ನು ಮರಗಟ್ಟಿಸುವಂತಹ ಈ ಕೊರೆಯುವ ಚಳಿಯ ನಡುವೆ, ತಾಯಿಯೊಬ್ಬರು ತನ್ನ ಹುತಾತ್ಮ ಮಗನ ಮೇಲಿಟ್ಟಿರುವ ಅಪ್ರತಿಮ ಪ್ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದೇಶಾದ್ಯಂತ ಜನರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಬಿಎಸ್ಎಫ್ ಹುತಾತ್ಮ ಯೋಧ ಗುರುನಾಮ್ ಸಿಂಗ್ ಅವರ ತಾಯಿ ಜಶ್ವಂತ್ ಕೌರ್ ಅವರು, ಚಳಿಯಿಂದ ರಕ್ಷಿಸಲು ತನ್ನ ಮಗನ ಕಲ್ಲಿನ ಪ್ರತಿಮೆಗೆ ಅತ್ಯಂತ ಕಾಳಜಿಯಿಂದ ಕಂಬಳಿ ಹೊದಿಸುತ್ತಿರುವ ದೃಶ್ಯವು ‘ಜೀವ ಮತ್ತು ಮರಣ’ದ ಆಚೆಗಿನ ತಾಯಿಯ ಮಮತೆಯನ್ನು ಸಾಕ್ಷೀಕರಿಸಿದೆ.
ಶಿಲೆಯಲ್ಲೂ ಮಗನನ್ನು ಕಂಡ ಜನ್ಮದಾತೆ
ಜಮ್ಮುವಿನ ಆರ್‌ಎಸ್ ಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಹುತಾತ್ಮ ಗುರುನಾಮ್ ಸಿಂಗ್ ಅವರ ಸ್ಮಾರಕದ ಬಳಿ ಈ ಭಾವನಾತ್ಮಕ ಘಟನೆ ನಡೆದಿದೆ. ತಾಪಮಾನವು ಶೂನ್ಯ ಡಿಗ್ರಿಯ ಹತ್ತಿರಕ್ಕೆ ಕುಸಿದಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿರುವ ಈ ಸಮಯದಲ್ಲಿ ಜಶ್ವಂತ್ ಕೌರ್ ಅವರು ದಪ್ಪನೆಯ ಕಂಬಳಿಯನ್ನು ತಂದು ತನ್ನ ಮಗನ ಪ್ರತಿಮೆಗೆ ಹೊದಿಸಿದ್ದಾರೆ. “ನಾನೊಬ್ಬ ತಾಯಿ. ಈ ಮೈಕೊರೆಯುವ ಚಳಿಯಲ್ಲಿ ನಾವು ಹತ್ತಾರು ಬಟ್ಟೆಗಳನ್ನು ಧರಿಸಿದರೂ ಚಳಿ ತಡೆಯಲು ಕಷ್ಟಪಡುತ್ತಿದ್ದೇವೆ. ಹಾಗಿರುವಾಗ ನನ್ನ ಮಗನನ್ನು ಈ ಕೊರೆಯುವ ಗಾಳಿಗೆ ತೆರೆದಿಡಲು ನನಗೆ ಹೇಗೆ ತಾನೇ ಮನಸ್ಸು ಬಂದೀತು?” ಎಂದು ಅವರು ಗದ್ಗದಿತ ಕಂಠದಿಂದ ಹೇಳಿರುವ ಮಾತುಗಳು ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಗ್ರಾಮಸ್ಥರ ಪ್ರಕಾರ, ಜಶ್ವಂತ್ ಅವರು ಪ್ರತಿದಿನವೂ ಈ ಸ್ಮಾರಕದ ಬಳಿಗೆ ಬರುತ್ತಾರೆ ಮತ್ತು ಮಗ ಇನ್ನೂ ಜೀವಂತವಾಗಿದ್ದಾನೆ ಎಂಬಂತೆ ಪ್ರತಿಮೆಯೊಂದಿಗೆ ಮಾತನಾಡುತ್ತಾ ಸಮಯ ಕಳೆಯುತ್ತಾರೆ.
ಹೀರಾ ನಗರದ ಹೀರೊ ಗುರುನಾಮ್ ಸಿಂಗ್
ಕಾನ್ಸ್ಟೇಬಲ್ ಗುರುನಾಮ್ ಸಿಂಗ್ ಅವರ ಶೌರ್ಯದ ಕಥೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತದ್ದು. 2016ರ ಅ.21ರಂದು ಅಂತಾರಾಷ್ಟ್ರೀಯ ಗಡಿಯ ಹೀರಾ ನಗರ ಸೆಕ್ಟರ್‌ನಲ್ಲಿ ಕರ್ತವ್ಯದಲ್ಲಿದ್ದಾಗ, ಪಾಕಿಸ್ತಾನಿ ಪಡೆಗಳ ಶೆಲ್ ದಾಳಿಯ ಗುರಾಣಿಯೊಂದಿಗೆ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪನ್ನು ಇವರು ಏಕಾಂಗಿಯಾಗಿ ತಡೆದಿದ್ದರು. ಮರುದಿನ ಬೆಳಿಗ್ಗೆ ಶತ್ರು ಪಡೆಯ ಸ್ನೈಪರ್ ದಾಳಿಗೆ ತುತ್ತಾದ ಗುರುನಾಮ್, ತಲೆಗೆ ತೀವ್ರ ಗಾಯಗಳಾಗಿದ್ದರೂ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡಿ ಅ.22ರಂದು ವೀರಮರಣವನ್ನಪ್ಪಿದ್ದರು. ಅವರ ಈ ಅಪ್ರತಿಮ ಸೇವೆಗಾಗಿ ಮರಣೋತ್ತರವಾಗಿ ‘ರಾಷ್ಟ್ರಪತಿ ಪೊಲೀಸ್ ಪದಕ’ ನೀಡಿ ಗೌರವಿಸಲಾಗಿತ್ತು.
ಜಾಲತಾಣಗಳಲ್ಲೂ ಹರಿಯಿತು ಪ್ರೀತಿಯ ಮಹಾಪೂರ
ಮೇಜರ್ ಪೂನಿಯಾ ಸೇರಿದಂತೆ ಅನೇಕ ಗಣ್ಯರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಾಯಿಯ ಪ್ರೀತಿಯ ಮುಂದೆ ಸಾವು ಕೂಡ ಸೋಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲ್ಲಿನ ಪ್ರತಿಮೆಯಲ್ಲೂ ಜೀವಂತ ಮಗನನ್ನು ಕಾಣುವ ಈ ತಾಯಿಯ ಚಿತ್ರಣವು ದೇಶಭಕ್ತಿ ಮತ್ತು ಮಮತೆಯ ಅಪರೂಪದ ಸಂಗಮವಾಗಿ ಮೂಡಿಬಂದಿದೆ. ಈ ವಿಡಿಯೋ ಕೇವಲ ಚಳಿಯ ತೀವ್ರತೆಯನ್ನಷ್ಟೇ ಅಲ್ಲದೆ, ಗಡಿಯಲ್ಲಿ ಮಗನನ್ನು ಕಳೆದುಕೊಂಡ ತಾಯಿಯ ಎದೆಯೊಳಗಿನ ಕಿಚ್ಚನ್ನು ಕೂಡ ಜಗತ್ತಿಗೆ ತೋರಿಸಿಕೊಟ್ಟಿದೆ.
ಇದನ್ನೂ ಓದಿ: ಕರಾವಳಿ ಭಾಗದಲ್ಲಿ ಕೇರಳ, ಗೋವಾ ಮಾದರಿಯಂತೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡ್ಬೇಕು | ಡಿಕೆಶಿ



















