ನವಾಡ : ನಾವು ಡಿಜಿಟಲ್ ಕ್ರಾಂತಿ, ಎಐ ಯುಗಕ್ಕೆ ಕಾಲಿರಿಸಿದರೂ ಅಂಧಶ್ರದ್ಧೆ, ಮೌಢ್ಯ ಮಾತ್ರ ನಮ್ಮನ್ನು ಬಿಟ್ಟುಹೋಗಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ, ಬಿಹಾರದಲ್ಲಿ ಮೌಢ್ಯದ ಕರಾಳತೆ ಮತ್ತೊಂದು ಅಮಾಯಕ ಜೀವವೊಂದನ್ನು ಬಲಿಪಡೆದಿದೆ. ನೆರೆಮನೆಯ ಮಗುವಿನ ಅನಾರೋಗ್ಯಕ್ಕೆ ಮಹಿಳೆಯೊಬ್ಬರ ಮಾಟಮಂತ್ರವೇ ಕಾರಣ ಎಂದು ಶಂಕಿಸಿದ ಉದ್ರಿಕ್ತ ಗುಂಪೊಂದು ಆಕೆಯನ್ನು ಹೊಡೆದು ಕೊಂದಿರುವ ಘೋರ ಘಟನೆ ನವಾಡ ಜಿಲ್ಲೆಯಲ್ಲಿ ನಡೆದಿದೆ. ಈ ದಾಳಿಯಲ್ಲಿ ಮೃತ ಮಹಿಳೆಯ ಇಬ್ಬರು ಸಂಬಂಧಿಕರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಕಿರಣ್ ದೇವಿ (35) ಎಂದು ಗುರುತಿಸಲಾಗಿದೆ.
ಈಕೆಯ ಸಾವಿಗೆ ನೆರೆಮನೆಯವರ ಸುಳ್ಳು ಸುದ್ದಿ ಮತ್ತು ಅಸಂಬದ್ಧ ನಂಬಿಕೆಗಳೇ ಕಾರಣ ಎನ್ನಲಾಗಿದೆ. ಮೃತ ಮಹಿಳೆಯ ನಾದಿನಿ ರೇಖಾ ದೇವಿ ನೀಡಿರುವ ಮಾಹಿತಿಯಂತೆ, ನೆರೆಯ ಮುಖೇಶ್ ಚೌಧರಿ ಎಂಬುವವರ ಮಗು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿತ್ತು. ಮಗುವನ್ನು ವೈದ್ಯರ ಬಳಿ ಕರೆದೊಯ್ದಾಗ, ಅದಕ್ಕೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಇದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಆದರೆ, ವೈದ್ಯಕೀಯ ವರದಿಯನ್ನು ನಂಬದ ಮಗುವಿನ ಪೋಷಕರು ಮತ್ತು ಸಂಬಂಧಿಕರು, ಕಿರಣ್ ದೇವಿ ಮಾಡಿದ ಮಾಟಮಂತ್ರದಿಂದಲೇ ಮಗು ಈ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿ ಆಕೆಯ ಮೇಲೆ ದ್ವೇಷ ಸಾಧಿಸಲು ಶುರು ಮಾಡಿದ್ದರು.
ಇದೇ ದ್ವೇಷದ ಹಿನ್ನೆಲೆಯಲ್ಲಿ ಮುಖೇಶ್ ಚೌಧರಿ, ಮಹೇಂದ್ರ ಚೌಧರಿ, ನಟ್ರು ಚೌಧರಿ ಮತ್ತು ಶೋಭಾ ದೇವಿ ಎಂಬವರು ಕಿರಣ್ ದೇವಿ ಮೇಲೆ ಮುಗಿಬಿದ್ದಿದ್ದಾರೆ. ಇಟ್ಟಿಗೆ, ಕಲ್ಲು ಮತ್ತು ಕಬ್ಬಿಣದ ರಾಡುಗಳಿಂದ ಆಕೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಆಕೆಯ ದೇಹದ ಮೇಲೆ ತೀವ್ರವಾದ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವವಾಗಿತ್ತು. ದಾಳಿಯ ವೇಳೆ ಆಕೆಯನ್ನು ರಕ್ಷಿಸಲು ಮುಂದಾದ ಕಿರಣ್ ದೇವಿಯ ಇಬ್ಬರು ನಾದಿನಿಯರಾದ ಲಲಿತಾ ದೇವಿ ಮತ್ತು ಇನ್ನೊಬ್ಬ ಮಹಿಳೆಯ ಮೇಲೂ ಹಲ್ಲೆ ನಡೆದಿದೆ. ತೀವ್ರ ಗಾಯಗೊಂಡಿದ್ದ ಕಿರಣ್ ದೇವಿಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಮೃತ ಮಹಿಳೆಯು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅಪರಾಧಿಗಳ ಬಂಧನ
ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ರಾಜೌಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಎಚ್‌ಒ ರಂಜಿತ್ ಕುಮಾರ್, ಎರಡು ಕುಟುಂಬಗಳ ನಡುವಿನ ವಿವಾದವು ಈ ಸಂಘರ್ಷಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶವಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮರುಕಳಿಸುತ್ತಿರುವ ಮೌಢ್ಯದ ಕರಾಳ ಇತಿಹಾಸ
ನವಾಡ ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದು ಮೊದಲೇನಲ್ಲ. ಒಂದೂವರೆ ವರ್ಷದ ಹಿಂದೆ ರಾಜೌಲಿಯಲ್ಲಿ ಮಹಿಳೆಯೊಬ್ಬರನ್ನು ಮಾಟಗಾತಿ ಎಂದು ಹಣೆಪಟ್ಟಿ ಕಟ್ಟಿ ಜೀವಂತವಾಗಿ ಸುಡಲಾಗಿತ್ತು. 2025ರ ಆಗಸ್ಟ್‌ನಲ್ಲಿಯೂ ದಂಪತಿಗಳ ಮೇಲೆ ಇಂತಹದ್ದೇ ದಾಳಿ ನಡೆದು ಪತಿ ಸಾವನ್ನಪ್ಪಿದ್ದರೆ, ಪತ್ನಿಯನ್ನು ಸುಟ್ಟು ಹಾಕಲು ಯತ್ನಿಸಲಾಗಿತ್ತು. ಶಿಕ್ಷಣದ ಕೊರತೆ ಮತ್ತು ವೈಜ್ಞಾನಿಕ ಮನೋಭಾವದ ಅಭಾವದಿಂದಾಗಿ ಬಿಹಾರದ ಗ್ರಾಮೀಣ ಭಾಗಗಳಲ್ಲಿ ಮಾಟಮಂತ್ರದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಗುರಿಯಾಗಿಸುತ್ತಿರುವಂಥ ಘಟನೆಗಳು ಈಗಲೂ ಮುಂದುವರಿದಿದೆ.
ಇದನ್ನೂ ಓದಿ : ಪಂಜಾಬ್ | ಪತ್ನಿ, ಇಬ್ಬರು ಹೆಣ್ಣುಮಕ್ಕನ್ನು ಗುಂಡಿಕ್ಕಿ ಕೊಂದು, ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ !



















