ನವದೆಹಲಿ : ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ ಐಪ್ಯಾಕ್ ನಿರ್ದೇಶಕರ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಬೆನ್ನಲ್ಲೇ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರು ಪ್ರತಿಭಟನೆ ನಡೆಸಿದ್ದು, ಇದು ಭಾರೀ ಹೈಡ್ರಾಮಾಗೆ ಸಾಕ್ಷಿಯಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಮುಂಭಾಗ ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆಯು ಪೊಲೀಸರು ಮಧ್ಯಪ್ರವೇಶಿಸುತ್ತಿದ್ದಂತೆಯೇ ಘೋಷಣೆಗಳು ಮತ್ತು ಕಿರುಚಾಟದೊಂದಿಗೆ ರಣಾಂಗಣವಾಗಿ ಮಾರ್ಪಟ್ಟಿತು. ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷದ ಪ್ರಮುಖ ನಾಯಕರನ್ನು ಪೊಲೀಸರು ಎಳೆದಾಡಿ ವಶಕ್ಕೆ ಪಡೆದ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತು.
ಡೆರೆಕ್ ಓಬ್ರಿಯನ್, ಮಹುವಾ ಮೊಯಿತ್ರಾ, ಶತಾಬ್ದಿ ರಾಯ್ ಮತ್ತು ಕೀರ್ತಿ ಆಜಾದ್ ಸೇರಿದಂತೆ ಟಿಎಂಸಿಯ ಪ್ರಬಲ ಸಂಸದರ ತಂಡ ಅಮಿತ್ ಶಾ ಕಚೇರಿಯ ಹೊರಗೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ದೆಹಲಿ ಪೊಲೀಸರು ಸಂಸದರನ್ನು ಬಲವಂತವಾಗಿ ತೆರವುಗೊಳಿಸಲು ಮುಂದಾದರು.

ಈ ವೇಳೆ ಪೊಲೀಸರು ಸಂಸದರನ್ನು ಎಳೆದಾಡಿ ವ್ಯಾನ್‌ಗೆ ತುಂಬುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಡೆರೆಕ್ ಓಬ್ರಿಯನ್, “ಚುನಾಯಿತ ಸಂಸದರಿಗೆ ದೇಶದಲ್ಲಿ ಎಂತಹ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ನೀವೇ ನೋಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದೆ ಮಹುವಾ ಮೊಯಿತ್ರಾ ಅವರು, “ದೇಶದ ಜನರು ಈ ದೌರ್ಜನ್ಯವನ್ನು ಗಮನಿಸುತ್ತಿದ್ದಾರೆ, ಬಿಜೆಪಿಯನ್ನು ನಾವು ಮಣಿಸಿಯೇ ತೀರುತ್ತೇವೆ” ಎಂದು ಗುಡುಗಿದರು.
ಐ-ಪ್ಯಾಕ್ ಕಚೇರಿ ಮೇಲೆ ದಾಳಿ ಕಿಚ್ಚು
ಕೋಲ್ಕತ್ತಾದಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್’ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯೇ ಈ ಸಂಘರ್ಷಕ್ಕೆ ಮೂಲ ಕಾರಣ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಸಂಸದೆ ಶತಾಬ್ದಿ ರಾಯ್ ಮಾತನಾಡಿ, “ಚುನಾವಣೆ ಹತ್ತಿರ ಬಂದಾಗಲೆಲ್ಲಾ ಕೇಂದ್ರ ಸರ್ಕಾರಕ್ಕೆ ತನಿಖಾ ಸಂಸ್ಥೆಗಳ ನೆನಪಾಗುತ್ತದೆ. ಇಡಿ ಮತ್ತು ಸಿಬಿಐ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕಿ ಚುನಾವಣೆ ಗೆಲ್ಲಲು ಬಿಜೆಪಿ ಸಂಚು ರೂಪಿಸುತ್ತಿದೆ” ಎಂದು ಕಿಡಿಕಾರಿದರು.
‘ನ್ಯೂ ಇಂಡಿಯಾ’ದ ಅವತಾರ ಎಂದ ಅಭಿಷೇಕ್ ಬ್ಯಾನರ್ಜಿ
ಈ ಬೆಳವಣಿಗೆಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಂಸದ ಅಭಿಷೇಕ್ ಬ್ಯಾನರ್ಜಿ, ಬಿಜೆಪಿಯ ‘ನವ ಭಾರತ’ದ ಕಲ್ಪನೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಪ್ರಜಾಪ್ರಭುತ್ವಕ್ಕೆ ಶಿಕ್ಷೆ ನೀಡಲಾಗುತ್ತಿದೆ ಮತ್ತು ತನಿಖಾ ಸಂಸ್ಥೆಗಳನ್ನು ಶಸ್ತ್ರಾಸ್ತ್ರಗಳಂತೆ ಬಳಸಲಾಗುತ್ತಿದೆ. ಪ್ರತಿಭಟನಾಕಾರರನ್ನು ಜೈಲಿಗೆ ಹಾಕಿ, ಅಪರಾಧಿಗಳಿಗೆ ಮನ್ನಣೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಇಡೀ ದೇಶವೇ ಶರಣಾದರೂ ಬಂಗಾಳ ಮಾತ್ರ ಈ ಅನ್ಯಾಯದ ವಿರುದ್ಧ ಹೋರಾಡಲಿದೆ” ಎಂದು ಅವರು ಸವಾಲು ಹಾಕಿದರು. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಸಂಸದರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಅಲ್ಲಿಯೂ ಸಂಸದರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಗಂಭೀರ ಆರೋಪ
ಮತ್ತೊಂದೆಡೆ, ಐ-ಪ್ಯಾಕ್ ಕಚೇರಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನಿಖೆಗೆ ಅಡ್ಡಿಪಡಿಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಯುತ್ತಿದ್ದಾಗ ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸಕ್ಕೆ ನುಗ್ಗಿ, ಕೆಲವು ಪ್ರಮುಖ ಸಾಕ್ಷ್ಯಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ತಮ್ಮೊಂದಿಗೆ ಒಯ್ದಿದ್ದಾರೆ ಎಂಬುದು ಇಡಿಯ ವಾದವಾಗಿದೆ. ಏಪ್ರಿಲ್‌ನಲ್ಲಿ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ರಾಜಕೀಯ ಕಿತ್ತಾಟ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ : ಇರಾನ್‌ನಲ್ಲಿ ಅಂತರ್ಜಾಲ ಸಂಪರ್ಕ ಸಂಪೂರ್ಣ ಸ್ಥಗಿತ | ಖಮೇನಿ ಆಡಳಿತದ ವಿರುದ್ಧ ಜನಾಕ್ರೋಶ ತೀವ್ರ!



















