ಮೀರತ್: ಡ್ರಗ್ಸ್ ಮಾಫಿಯಾದ ಕಿಂಗ್‌ಪಿನ್‌ವೊಬ್ಬ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಅಚ್ಚರಿಯೆಂದರೆ, ತನ್ನ ಮನೆಯೊಳಗೆ ರಹಸ್ಯ ಸುರಂಗ ನಿರ್ಮಿಸಿಕೊಂಡಿದ್ದ ಈತ, ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಅದರ ಮೂಲಕ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಾನೆ.
ಈ ಮಾದಕ ದ್ರವ್ಯ ಜಾಲದ ಸೂತ್ರಧಾರನನ್ನು ತಸ್ಲೀಮ್ ಎಂದು ಗುರುತಿಸಲಾಗಿದೆ. ಈತನ ಮೇಲೆ ಈಗಾಗಲೇ 70ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಹಲವಾರು ಬಾರಿ ಬಂಧನಕ್ಕೊಳಗಾಗಿದ್ದರೂ, ಪ್ರತಿ ಬಾರಿ ಜಾಮೀನಿನ ಮೇಲೆ ಹೊರಬರುತ್ತಿದ್ದ ಈತ ತನ್ನ ಕೃತ್ಯಗಳನ್ನು ಮುಂದುವರಿಸಿದ್ದ.
ಹೇಗಿದೆ ಈ ರಹಸ್ಯ ನೆಲಮನೆ?
ತಸ್ಲೀಮ್ ತನ್ನ ಮನೆಯಲ್ಲಿ ನೆಲದಿಂದ ಸುಮಾರು 15 ಅಡಿ ಆಳದಲ್ಲಿ ರಹಸ್ಯವಾದ ಬೇಸ್‌ಮೆಂಟ್ ನಿರ್ಮಿಸಿದ್ದ. ಈ ರಹಸ್ಯ ಜಾಗವನ್ನು ಮಾದಕ ವಸ್ತುಗಳನ್ನು ಬಚ್ಚಿಡಲು ಬಳಸುತ್ತಿದ್ದ. ಪೊಲೀಸರ ಕಣ್ಣು ತಪ್ಪಿಸಲು ನೆಲಮನೆಯಲ್ಲಿ ಮದುವೆ ಸಮಾರಂಭಗಳಿಗೆ ಬಳಸುವ ನೂರಾರು ಕುರ್ಚಿಗಳು ಮತ್ತು ಕಾರ್ಪೆಟ್‌ಗಳನ್ನು ಜೋಡಿಸಿಟ್ಟಿದ್ದ. ಅವುಗಳ ಅಡಿಯಲ್ಲಿ ಡ್ರಗ್ಸ್ ಪಾರ್ಸೆಲ್‌ಗಳನ್ನು ಅಡಗಿಸಿಡುತ್ತಿದ್ದ. ಪೊಲೀಸರು ಮನೆಯ ಮುಂಭಾಗದಿಂದ ದಾಳಿ ಮಾಡಿದಾಗ, ಈ ನೆಲಮನೆಯಲ್ಲಿದ್ದ ಕಿರು ನಿರ್ಗಮನ ದ್ವಾರದ ಮೂಲಕ ಹೊರಬಂದು ತಪ್ಪಿಸಿಕೊಂಡಿದ್ದಾನೆ.
ಮಗ ಮತ್ತು ಸಹಚರನ ಬಂಧನ
ಪೊಲೀಸರು ಈ ದಾಳಿಗೂ ಒಂದು ದಿನದ ಮುಂಚೆಯೇ ತಸ್ಲೀಮ್‌ನ ಮಗ ಶಹಬಾಜ್ ಮತ್ತು ಆತನ ಆಪ್ತ ಸಹಚರ ಸಲ್ಮಾನ್‌ನನ್ನು ಬಂಧಿಸಿದ್ದರು. ಅವರಿಂದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ದೊಡ್ಡ ಮಟ್ಟದ ಡ್ರಗ್ಸ್ ಸಾಗಾಟದ ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಮನೆಗೆ ನುಗ್ಗಿದ್ದರು. ಆದರೆ ಮುಖ್ಯ ಆರೋಪಿ ತಸ್ಲೀಮ್ ಮಾತ್ರ ಕೈಗೆ ಸಿಕ್ಕಿಲ್ಲ.
ಮಕ್ಕಳ ಬಳಕೆ
ಈ ಡ್ರಗ್ಸ್ ದಂಧೆಯಲ್ಲಿ ತಸ್ಲೀಮ್ ಅತಿ ಸಣ್ಣ ವಯಸ್ಸಿನ ಮಕ್ಕಳನ್ನು ಮಾದಕ ದ್ರವ್ಯ ಸಾಗಾಟಕ್ಕೆ ಬಳಸಿಕೊಳ್ಳುತ್ತಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಇದರ ಜೊತೆಗೆ ಉತ್ತರ ಪ್ರದೇಶ ಪೊಲೀಸರು ರಾಜ್ಯಾದ್ಯಂತ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಈ ತಿಂಗಳು ಇನ್ವರ್ಟರ್‌ಗಳ ಒಳಗೆ ಬಚ್ಚಿಟ್ಟಿದ್ದ 72 ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ತಸ್ಲೀಮ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಈಗಾಗಲೇ ಈತನ ಹಲವು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ; “ನನ್ನನ್ನ ಯಾರೂ ಏನೂ ಮಾಡಲಾರರು” : ಅತ್ಯಾಚಾರ ಸಂತ್ರಸ್ತೆಗೆ ಬಿಜೆಪಿ ಕೌನ್ಸಿಲರ್ ಪತಿ ಧಮ್ಕಿ!



















