ಲಂಡನ್: “ಭಯೋತ್ಪಾದನೆಯ ವಿಚಾರದಲ್ಲಿ ಭಾರತದ ನಿಲುವನ್ನು ಪ್ರಶ್ನಿಸುವ ಪಾಕಿಸ್ತಾನದ ಬಾಯಿ ಮುಚ್ಚಿಸಲು ನನಗೆ ಯಾವುದೇ ಅಲಂಕಾರಿಕ ಭಾಷಣಗಳ ಅಗತ್ಯವಿಲ್ಲ, ಕೇವಲ ಒಂದು ‘ಕ್ಯಾಲೆಂಡರ್‘ ಸಾಕು,” ಎಂದು ಹೇಳುವ ಮೂಲಕ ಭಾರತೀಯ ಕಾನೂನು ವಿದ್ಯಾರ್ಥಿಯೊಬ್ಬರು ಅಂತರಾಷ್ಟ್ರೀಯ ಚರ್ಚಾ ವೇದಿಕೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಕ್ಸ್‌ಫರ್ಡ್ ಯೂನಿಯನ್ ಮಾದರಿಯ ಚರ್ಚಾ ಸ್ಪರ್ಧೆಯಲ್ಲಿ ಮಾತನಾಡಿದ ಕಾನೂನು ವಿದ್ಯಾರ್ಥಿ ವಿರಾನ್ಶ್ ಭಾನುಶಾಲಿ, ಭಾರತದ ಭದ್ರತಾ ನೀತಿಯನ್ನು ‘ಜನಪ್ರಿಯತೆಗಾಗಿ ಮಾಡುವ ತಂತ್ರ’ (Populism) ಎಂದು ಜರೆಯುತ್ತಿದ್ದವರಿಗೆ ದಿಟ್ಟ ಉತ್ತರ ನೀಡಿದ್ದಾರೆ.
ನಾನು ಮುಂಬೈ ಮಗ, ಆ ಭಯವನ್ನು ಕಂಡಿದ್ದೇನೆ
ತಮ್ಮ ವಾದವನ್ನು ಮಂಡಿಸುತ್ತಾ ಭಾನುಶಾಲಿ, “ನಾನು ಮುಂಬೈನಲ್ಲಿ ಬೆಳೆದವನು. 1993ರ ಸರಣಿ ಬಾಂಬ್ ಸ್ಫೋಟ ನಡೆದಾಗ ನನ್ನ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿ ರೈಲ್ವೆ ನಿಲ್ದಾಣ ಹೊತ್ತಿ ಉರಿದಿತ್ತು. ನನ್ನ ತಂದೆ-ತಾಯಿಯ ಧ್ವನಿಯಲ್ಲಿದ್ದ ಭಯವನ್ನು ನಾನು ಕಂಡಿದ್ದೇನೆ. ಆಗ ಮುಂಬೈ ಮೂರು ರಾತ್ರಿ ನಿದ್ದೆ ಮಾಡಿರಲಿಲ್ಲ, ನಾನೂ ಕೂಡ,” ಎಂದು ಭಾವುಕರಾದರು. “ಮನೆಯ ಬಾಗಿಲಿಗೆ ಹಾಕುವ ಬೀಗ ಕೇವಲ ಪ್ರದರ್ಶನಕ್ಕೆ ಅಲ್ಲ, ಅದು ಕಳ್ಳರಿಂದ ರಕ್ಷಣೆ ಪಡೆಯಲು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು,” ಎಂದು ಅವರು ಮಾರ್ಮಿಕವಾಗಿ ನುಡಿದರು.
ಕ್ಯಾಲೆಂಡರ್ ನೋಡಿ, ಸತ್ಯ ತಿಳಿಯಿರಿ!
ಭಾರತವು ಚುನಾವಣೆ ಗೆಲ್ಲಲು ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, “1993ರ ಮಾರ್ಚ್‌ನಲ್ಲಿ ಮುಂಬೈ ಸ್ಫೋಟವಾದಾಗ ಚುನಾವಣೆ ಇರಲಿಲ್ಲ. ಆಗ ಚುನಾವಣೆ ಬರಲು ಇನ್ನೂ 3 ವರ್ಷಗಳಿದ್ದವು. ಅದು ವೋಟಿಗಾಗಿ ನಡೆದಿದ್ದಲ್ಲ, ದಾವೂದ್ ಇಬ್ರಾಹಿಂ ಮತ್ತು ಐಎಸ್‌ಐ ಭಾರತದ ಆರ್ಥಿಕ ಬೆನ್ನುಮೂಳೆ ಮುರಿಯಲು ನಡೆಸಿದ ಯುದ್ಧವಾಗಿತ್ತು,” ಎಂದು ಇತಿಹಾಸವನ್ನು ಬಿಚ್ಚಿಟ್ಟರು.
26/11ರ ಮುಂಬೈ ದಾಳಿಯ ನಂತರ ಅಂದಿನ ಸರ್ಕಾರ ಶಾಂತಿ ಮತ್ತು ಸಂಯಮದ ಮಾರ್ಗ ತುಳಿಯಿತು. ಆದರೆ ಆ ಸಂಯಮ ನಮಗೆ ಶಾಂತಿಯನ್ನು ತರಲಿಲ್ಲ, ಬದಲಿಗೆ ಪಠಾಣ್‌ಕೋಟ್, ಉರಿ ಮತ್ತು ಪುಲ್ವಾಮಾ ದಾಳಿಗಳನ್ನು ಉಡುಗೊರೆಯಾಗಿ ನೀಡಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಆಪರೇಷನ್ ಸಿಂದೂರ’ ಹಿಂದಿನ ಸತ್ಯ
ಇತ್ತೀಚೆಗೆ ನಡೆದ ‘ಆಪರೇಷನ್ ಸಿಂದೂರ’ ಬಗ್ಗೆ ಪ್ರಸ್ತಾಪಿಸಿದ ಭಾನುಶಾಲಿ, “ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಹತ್ಯೆ ಮಾಡಿದಾಗ ಚುನಾವಣೆಗಳು ಮುಗಿದಿದ್ದವು. ಭಯೋತ್ಪಾದಕರು ಕೊಂದ ಗಂಡಸರ ಪತ್ನಿಯರ ಹಣೆಬರಹ ಅಳಿಸಿಹೋಗಿತ್ತು. ಆ ವಿಧವೆಯರ ಕುಂಕುಮದ ಸಂಕೇತವಾಗಿಯೇ ನಾವು ಪ್ರತಿದಾಳಿಗೆ ‘ಸಿಂದೂರ’ ಎಂದು ಹೆಸರಿಟ್ಟೆವು. ಇದು ವೃತ್ತಿಪರತೆಯೇ ಹೊರತು ಪ್ರಚಾರದ ತಂತ್ರವಲ್ಲ,” ಎಂದು ಸ್ಪಷ್ಟಪಡಿಸಿದರು.
ರೊಟ್ಟಿ ಇಲ್ಲದಿದ್ದಾಗ ಸರ್ಕಸ್ ತೋರಿಸುವಿರಿ!
ಪಾಕಿಸ್ತಾನದ ಆರ್ಥಿಕ ದುಸ್ಥಿತಿಯನ್ನು ವ್ಯಂಗ್ಯವಾಡಿದ ಅವರು, “ಭಾರತದಲ್ಲಿ ನಾವು ಯುದ್ಧದ ನಂತರ ಪೈಲಟ್‌ಗಳ ಜತೆ ಚರ್ಚೆ ನಡೆಸುತ್ತೇವೆ. ಆದರೆ ಪಾಕಿಸ್ತಾನದಲ್ಲಿ ಹಾಡುಗಳನ್ನು ಆಟೋ-ಟ್ಯೂನ್ ಮಾಡಲಾಗುತ್ತದೆ. ನಿಮ್ಮ ಜನರಿಗೆ ತಿನ್ನಲು ರೊಟ್ಟಿ (ಆಹಾರ) ಕೊಡಲು ಸಾಧ್ಯವಾಗದಿದ್ದಾಗ, ನೀವು ಅವರಿಗೆ ಇಂತಹ ಯುದ್ಧದ ಸರ್ಕಸ್ ತೋರಿಸುತ್ತೀರಿ,” ಎಂದು ಕಟುವಾಗಿ ಟೀಕಿಸಿದರು.
“ನಾವು ಈರುಳ್ಳಿ ಮತ್ತು ವಿದ್ಯುತ್ ವ್ಯಾಪಾರ ಮಾಡುವ ಸಾಮಾನ್ಯ ನೆರೆಹೊರೆಯವರಾಗಿರಲು ಬಯಸುತ್ತೇವೆ. ಆದರೆ ಭಯೋತ್ಪಾದನೆಯನ್ನು ವಿದೇಶಾಂಗ ನೀತಿಯಾಗಿ ಬಳಸುವುದನ್ನು ನಿಲ್ಲಿಸುವವರೆಗೂ ನಾವು ಸುಮ್ಮನಿರಲ್ಲ,” ಎಂದು ಎಚ್ಚರಿಸುವ ಮೂಲಕ ಭಾನುಶಾಲಿ ಭಾರತದ ನಿಲುವನ್ನು ಜಗತ್ತಿನ ಮುಂದೆ ಸಾರಿದರು.
ಇದನ್ನೂ ಓದಿ : ಮುಂಬೈ ಪಾಲಿಕೆ ಸಮರ | ಒಂದಾದ ಠಾಕ್ರೆ ಸಹೋದರರು ; ‘ಬಟೇಂಗೆ ತೋ ಕಟೇಂಗೆ’ ಎನ್ನುತ್ತಾ ಕೇಸರಿ ಕಲಿಗಳ ರಣಕಹಳೆ!



















