ನವದೆಹಲಿ: ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ದೆಹಲಿಯಲ್ಲಿರುವ ಬಾಂಗ್ಲಾದೇಶ ಹೈ ಕಮಿಷನ್ ಎದುರು ಇಂದು ಭಾರೀ ಪ್ರತಿಭಟನೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯು ರಾಜಧಾನಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ.
ದುರ್ಗಾಬಾಯಿ ದೇಶಮುಖ್ ಸೌತ್ ಕ್ಯಾಂಪಸ್ ಮೆಟ್ರೋ ನಿಲ್ದಾಣದ ಬಳಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆಯ ಮುನ್ಸೂಚನೆ ಇದ್ದಿದ್ದರಿಂದ ದೆಹಲಿ ಪೊಲೀಸರು ಬಾಂಗ್ಲಾದೇಶ ಹೈಕಮಿಷನ್ ಮತ್ತು ರಾಜತಾಂತ್ರಿಕ ಪ್ರದೇಶದ ಸುತ್ತಮುತ್ತ ಭಾರೀ ಭದ್ರತೆಯನ್ನು ಏರ್ಪಡಿಸಿದ್ದರು. ಸ್ಯಾನ್ ಮಾರ್ಟಿನ್ ಮಾರ್ಗದಲ್ಲಿ ಮೂರು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರಿಗೆ ಹೈ ಕಮಿಷನ್ ಕಚೇರಿಯತ್ತ ಮುಂದುವರಿಯಲು ಬಿಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.
ಆದರೂ, ಆಕ್ರೋಶಗೊಂಡ ಪ್ರತಿಭಟನಾಕಾರರು ಮೊದಲ ಹಂತದ ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಎರಡನೇ ಹಂತದಲ್ಲಿ ಅವರನ್ನು ತಡೆದರು. ಪ್ರತಿಭಟನಾಕಾರರನ್ನು ತಡೆಯಲು ರಸ್ತೆಗೆ ಅಡ್ಡಲಾಗಿ ಡಿಟಿಸಿ ಬಸ್‌ಗಳನ್ನು ನಿಲ್ಲಿಸಲಾಗಿತ್ತು.
ಪ್ರತಿಭಟನಾಕಾರರು “ಯೂನುಸ್ ಸರ್ಕಾರ, ಎಚ್ಚರಗೊಳ್ಳಿ” (Yunus sarkar, hosh mein aao) ಎಂಬ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಹನುಮಾನ್ ಚಾಲೀಸ ಪಠಣ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿನ ಘಟನೆಯನ್ನು ಖಂಡಿಸಿ ಪ್ರತಿಭಟನಾಕಾರರು ಪ್ರತಿಕೃತಿಯನ್ನು ದಹಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಲು ವಿಹೆಚ್‌ಪಿ ನಾಯಕರು ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮತ್ತು ಶಿಸ್ತು ಮೀರದಂತೆ ಮನವಿ ಮಾಡಿದರು. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರೆಡ್‌ನಲ್ಲಿ 65 ಲಕ್ಷ ಮೌಲ್ಯದ ಮಾದಕವಸ್ತು ಸಾಗಾಟ | ನೈಜೀರಿಯಾ ಮೂಲದ ಮಹಿಳೆ ಬಂಧನ



















