ನವದೆಹಲಿ/ಜೈಪುರ: ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದಾರೆನ್ನಲಾದ ಘಟನೆ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕೆಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ.
ಭಾನುವಾರ ಜೈಪುರದಲ್ಲಿ ಕಾಂಗ್ರೆಸ್ ವತಿಯಿಂದ ಬಿಜೆಪಿ ವಿರುದ್ಧದ ‘ವೋಟ್ ಚೋರ್ ಗದ್ದಿ ಚೋಡ್’ (ಮತ ಕಳ್ಳರೇ ಅಧಿಕಾರ ಬಿಡಿ) ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜೈಪುರ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಮಂಜು ಲತಾ ಮೀನಾ ಅವರು ಪ್ರಧಾನಿ ಮೋದಿ ಅವರ ವಿರುದ್ಧ ‘ಕಬ್ರ್’ (ಸಮಾಧಿ) ಎಂಬ ಪದಬಳಕೆ ಮಾಡಿ ಘೋಷಣೆ ಕೂಗಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು ಲತಾ ಮೀನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ಪ್ರಧಾನಿ ಮೋದಿ ಉದ್ಯೋಗ, ಯುವಜನತೆ, ಮಹಿಳೆಯರು ಅಥವಾ ರೈತರ ಬಗ್ಗೆ ಮಾತನಾಡುವುದಿಲ್ಲ. ಅವರು ಕೇವಲ ವಿಷಯಾಂತರ ಮಾಡುತ್ತಾರೆ. ಮತ ಕಳ್ಳತನದ ಬಗ್ಗೆ ಇರುವ ಜನರ ಆಕ್ರೋಶವನ್ನಷ್ಟೇ ನಾನು ವ್ಯಕ್ತಪಡಿಸಿದ್ದೇನೆ,” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಆಕ್ರೋಶ:
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ರಾಜ್ಯಸಭೆಯಲ್ಲಿ ಇಂದು ಈ ವಿಷಯ ಪ್ರಸ್ತಾಪಿಸಿದ್ದಾರೆ. “ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕೂಗಲಾದ ಘೋಷಣೆಗಳು ಆ ಪಕ್ಷದ ನೈಜ ಮನಸ್ಥಿತಿಯನ್ನು ತೋರಿಸುತ್ತದೆ. ದೇಶದ ಪ್ರಧಾನಿಯ ಸಾವನ್ನು ಬಯಸುವುದು ಅತ್ಯಂತ ಖಂಡನೀಯ. ಈ ಅಸಭ್ಯ ವರ್ತನೆಗಾಗಿ ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ದೇಶದ ಕ್ಷಮೆ ಕೇಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ರಾಜಕೀಯದಲ್ಲಿ ನಾವು ಎದುರಾಳಿಗಳೇ ಹೊರತು ಶತ್ರುಗಳಲ್ಲ. ರಾಜಕೀಯ ವಿರೋಧಿಗಳನ್ನು ಸಾಯಿಸುವ ಬೆದರಿಕೆ ಹಾಕುವುದು ಯಾವ ಸಂಸ್ಕೃತಿ? ರಾಹುಲ್ ಗಾಂಧಿ ಮತ್ತು ಖರ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಕ್ಷಮೆಯಾಚಿಸಬೇಕು,” ಎಂದು ಆಗ್ರಹಿಸಿದ್ದಾರೆ.
ಅಂತರ ಕಾಯ್ದುಕೊಂಡ ಮಿತ್ರಪಕ್ಷಗಳು:
ಕಾಂಗ್ರೆಸ್ ನಾಯಕಿ ನೀಡಿದ ಹೇಳಿಕೆಯಿಂದ ‘ಇಂಡಿಯಾ’ ಒಕ್ಕೂಟದ ಮಿತ್ರಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಅಂತರ ಕಾಯ್ದುಕೊಂಡಿವೆ. “ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಸಾಂವಿಧಾನಿಕ ಹುದ್ದೆಯಲ್ಲಿರುವವರ ಬಗ್ಗೆ ಮಾತನಾಡುವಾಗ ಸಂಯಮ ಕಾಪಾಡಿಕೊಳ್ಳಬೇಕು,” ಎಂದು ಎಸ್‌ಪಿ ಸಂಸದ ರಾಜೀವ್ ರೈ ಹೇಳಿದ್ದಾರೆ. “ಏನೇ ಆದರೂ ಮೋದಿ ದೇಶದ ಪ್ರಧಾನಿ. ಇಂತಹ ಘೋಷಣೆಗಳು ಸರಿಯಲ್ಲ,” ಎಂದು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಪ್ರವಾಸಿ ಬಸ್ | ತಪ್ಪಿದ ಭಾರೀ ಅನಾಹುತ!


















