ಇದು ಗುರುವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಕಂಡುಬಂದ ನಾಟಕೀಯ ದೃಶ್ಯ. ಯುವ ವೇಗಿ ಅರ್ಶದೀಪ್ ಸಿಂಗ್ ಅವರ ಈ ಅನಿರೀಕ್ಷಿತ ಪ್ರಮಾದ, ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಸಹನೆಯ ಕಟ್ಟೆಯೊಡೆಯುವಂತೆ ಮಾಡಿತು.
ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಅರ್ಶದೀಪ್ ಅವರ ಬೌಲಿಂಗ್ ಲಯ ಸಂಪೂರ್ಣ ಹಳಿ ತಪ್ಪಿದ್ದು, ಗಂಭೀರ್ ಅವರನ್ನು ಕೆರಳಿಸಿತು. ಅರ್ಶದೀಪ್ ಒಂದರ ಹಿಂದೊಂದು ವೈಡ್ ಎಸೆಯುತ್ತಿದ್ದಾಗ, ಗ್ಯಾಲರಿಯಲ್ಲಿ ಕುಳಿತಿದ್ದ ಗಂಭೀರ್ ತೀವ್ರ ಅಸಮಾಧಾನದಿಂದ ತಲೆ ಕೊಡವಿಕೊಳ್ಳುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಟಿವಿ ಪರದೆಯ ಮೇಲೆ ಪದೇ ಪದೇ ಪ್ರಸಾರವಾದವು.
ಏನಾಯ್ತು ಆ 11ನೇ ಓವರ್‌ನಲ್ಲಿ?
ದಕ್ಷಿಣ ಆಫ್ರಿಕಾದ ಇನಿಂಗ್ಸ್‌ನ 11ನೇ ಓವರ್ ಎಸೆಯಲು ಬಂದ ಅರ್ಶದೀಪ್, ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದರು. ಮೊದಲ ಎಸೆತವನ್ನೇ ಕ್ವಿಂಟನ್ ಡಿ ಕಾಕ್ ನೇರವಾಗಿ ಬೌಲರ್ ತಲೆ ಮೇಲಿಂದ ಸಿಕ್ಸರ್‌ಗೆ ಅಟ್ಟಿದರು. ಈ ಹೊಡೆತದಿಂದ ವಿಚಲಿತರಾದ ಅರ್ಶದೀಪ್, ನಂತರ ಲೈನ್ ಅಂಡ್ ಲೆಂತ್ ಕಾಯ್ದುಕೊಳ್ಳಲು ಹರಸಾಹಸ ಪಟ್ಟರು.
ನಿಯಂತ್ರಣ ಮರಳಿ ಪಡೆಯುವ ಭರದಲ್ಲಿ ಚೆಂಡನ್ನು ‘ವೈಡ್’ ಲೈನ್ ಆಚೆಗೆ ಎಸೆದರು. ಇದು ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಬಾರಿ ಪುನರಾವರ್ತನೆಯಾಯಿತು! ವೈಡ್ ಯಾರ್ಕರ್ ಹಾಕುವ ಪ್ರಯತ್ನದಲ್ಲಿ ಸತತವಾಗಿ ವೈಡ್‌ಗಳನ್ನು ನೀಡುತ್ತಾ ಹೋದರು. ಅಂತಿಮವಾಗಿ ಒಂದು ಓವರ್ ಮುಗಿಸಲು ಅವರು ಬರೋಬ್ಬರಿ 13 ಎಸೆತಗಳನ್ನು ಹಾಕಬೇಕಾಯಿತು. ಈ ಒಂದೇ ಓವರ್‌ನಲ್ಲಿ ಹರಿಣಗಳ ಪಡೆಗೆ 18 ರನ್ ಲಭಿಸಿತು. ಇದು ಪಂದ್ಯದ ಗತಿಯನ್ನೇ ಬದಲಿಸಿ, ದಕ್ಷಿಣ ಆಫ್ರಿಕಾ ತಂಡಕ್ಕೆ 100 ರನ್ ಗಡಿ ದಾಟಲು ನೆರವಾಯಿತು.
ಅನಪೇಕ್ಷಿತ ದಾಖಲೆಗೆ ಅರ್ಶದೀಪ್ ಭಾಜನ
ಈ ಕಳಪೆ ಬೌಲಿಂಗ್ ಮೂಲಕ ಅರ್ಶದೀಪ್ ಅನಪೇಕ್ಷಿತ ದಾಖಲೆಯೊಂದಕ್ಕೆ ಸಾಕ್ಷಿಯಾದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ) ಒಂದೇ ಓವರ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಹಾಕಿದ ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಅವರ ದಾಖಲೆಯನ್ನು ಅರ್ಶದೀಪ್ ಸರಿಗಟ್ಟಿದರು. ನವೀನ್ ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಈ ದಾಖಲೆ ಬರೆದಿದ್ದರು. ಇದೀಗ ಅರ್ಶದೀಪ್, ಟಿ20 ಇತಿಹಾಸದಲ್ಲಿ ಸುದೀರ್ಘ ಓವರ್ ಎಸೆದ ಭಾರತೀಯ ಬೌಲರ್ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ.
ಮೊದಲ ಪಂದ್ಯದ ಹೀರೋ, ಇಂದು ಝೀರೋ?
ವಿಪರ್ಯಾಸವೆಂದರೆ, ಇದೇ ಅರ್ಶದೀಪ್ ಮೊದಲ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿದ್ದರು. ಕಟ್ಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಕಬಳಿಸಿ, ದಕ್ಷಿಣ ಆಫ್ರಿಕಾವನ್ನು 74 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಗುರುವಾರದ ಪಂದ್ಯದಲ್ಲಿ ಅವರ ಬೌಲಿಂಗ್ ಸಂಪೂರ್ಣ ಮಂಕಾಗಿತ್ತು.
ಇದನ್ನೂ ಓದಿ: 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಗೆ ಕೊಹ್ಲಿ ಎಂಟ್ರಿ ; ದೆಹಲಿ ತಂಡದಲ್ಲಿ ರಿಷಬ್ ಪಂತ್‌ಗೂ ಸ್ಥಾನ



















