ಮುಂಬರುವ ವಿಜಯ್ ಹಜಾರೆ ಟ್ರೋಫಿಗಾಗಿ (ಒನ್‌ಡೇ ಟೂರ್ನಿ) ದೆಹಲಿ ಕ್ರಿಕೆಟ್ ಸಂಸ್ಥೆ (DDCA) ಗುರುವಾರ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ದೇಸಿ ಅಂಗಳದಲ್ಲಿ ತಾರಾ ಮೆರುಗು ಹೆಚ್ಚಾಗಿದೆ.
ವಿಶೇಷವೆಂದರೆ, ರನ್ ಮೆಷಿನ್ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಅವರು ಕೊನೆಯದಾಗಿ 2010ರ ಫೆಬ್ರವರಿಯಲ್ಲಿ ಸರ್ವಿಸಸ್ ವಿರುದ್ಧ ಈ ಟೂರ್ನಿಯಲ್ಲಿ ಆಡಿದ್ದರು. ಅಲ್ಲದೆ, 2013ರ ನಂತರ ಇದೇ ಮೊದಲ ಬಾರಿಗೆ ದೆಹಲಿ ಪರ ಲಿಸ್ಟ್ ‘ಎ’ ಪಂದ್ಯವನ್ನಾಡುತ್ತಿದ್ದಾರೆ. ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗ ಗುತ್ತಿಗೆಯಲ್ಲಿರುವ ಆಟಗಾರರು ಕಡ್ಡಾಯವಾಗಿ ದೇಸಿ ಕ್ರಿಕೆಟ್ ಆಡಬೇಕೆಂಬ ಬಿಸಿಸಿಐ ನಿಯಮಕ್ಕೆ ಬದ್ಧರಾಗಿ ಕೊಹ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ರಿಷಬ್ ಪಂತ್ ಕೂಡ ಕಣಕ್ಕೆ:
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ತಂಡದಲ್ಲಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯದ ವಿಕೆಟ್ ಕೀಪರ್ ರಿಷಬ್ ಪಂತ್ ಕೂಡ ದೆಹಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಗಸ್ಟ್ 2024ರಿಂದ ಏಕದಿನ ಪಂದ್ಯ ಆಡದ ಪಂತ್‌ಗೆ, ಲಯ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.
ಡಿಸೆಂಬರ್ 24ಕ್ಕೆ ಮೊದಲ ಪಂದ್ಯ:
ದೆಹಲಿ ತಂಡವು ಡಿಸೆಂಬರ್ 24 ರಂದು ಆಂಧ್ರಪ್ರದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡುವ ಮೂಲಕ ಅಭಿಯಾನ ಆರಂಭಿಸಲಿದೆ. ಸಾಮಾನ್ಯವಾಗಿ ದೇಸಿ ಪಂದ್ಯಗಳಿಗೆ ಕಡಿಮೆ ಪ್ರೇಕ್ಷಕರಿರುತ್ತಾರೆ, ಆದರೆ ಕೊಹ್ಲಿ ಮತ್ತು ಪಂತ್ ಕಣಕ್ಕಿಳಿಯುತ್ತಿರುವುದರಿಂದ ಈ ಪಂದ್ಯದ ಬಗ್ಗೆ ಭಾರೀ ಕುತೂಹಲ ಮೂಡಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿದ್ದ ಆಟಗಾರರ ಜೊತೆಗೆ, ವಿರಾಟ್ ಮತ್ತು ಪಂತ್ ವಿಜಯ್ ಹಜಾರೆ ಟ್ರೋಫಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಡಿಡಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ವಿರಾಟ್ ಕೊಹ್ಲಿ ಪ್ರಸಕ್ತ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದಾರೆ. 2025ರಲ್ಲಿ ಆಡಿದ 13 ಏಕದಿನ ಪಂದ್ಯಗಳಲ್ಲಿ 3 ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 651 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೊಂದರಲ್ಲೇ ಅವರು ಎರಡು ಶತಕ ಸಿಡಿಸಿದ್ದರು.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ ; ಸುರಕ್ಷತಾ ಷರತ್ತಿನೊಂದಿಗೆ ಪಂದ್ಯಾವಳಿಗೆ ಸಂಪುಟ ಒಪ್ಪಿಗೆ



















