ನವದೆಹಲಿ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಟಾಟಾ ಮೋಟಾರ್ಸ್‌ನ (Tata Motors) ಐಕಾನಿಕ್ ‘ಸಿಯೆರಾ‘ (Sierra) ಎಸ್‌ಯುವಿ ಮತ್ತೆ ಬಂದಿದೆ. ಹೊಸ ಲುಕ್, ಹೈಟೆಕ್ ವೈಶಿಷ್ಟ್ಯಗಳು ಮತ್ತು ಪ್ರಬಲ ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ ಸಿಯೆರಾ, ವೇಗದಲ್ಲಿಯೂ ದಾಖಲೆ ಬರೆದಿದೆ. ಟಾಟಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಈ ಎಸ್‌ಯುವಿ ಬರೋಬ್ಬರಿ 222 ಕಿ.ಮೀ. ವೇಗದಲ್ಲಿ ಚಲಿಸಿ ಅಚ್ಚರಿ ಮೂಡಿಸಿದೆ. ಆದರೆ, ಗ್ರಾಹಕರಿಗೆ ಸಿಗುವ ಕಾರಿನಲ್ಲಿ ಈ ವೇಗ ಇರುವುದಿಲ್ಲ! ಅದರ ಅಸಲಿ ಕಾರಣವೇನು ಇಲ್ಲಿದೆ ನೋಡಿ.
222 kmph ವೇಗ ದಾಖಲಿಸಿದ್ದು ಎಲ್ಲಿ?
ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಏಷ್ಯಾದ ಅತಿದೊಡ್ಡ ಹೈ-ಸ್ಪೀಡ್ ಟ್ರ್ಯಾಕ್ ‘ನ್ಯಾಟ್ರ್ಯಾಕ್ಸ್’ನಲ್ಲಿ (NATRAX) ಈ ಪರೀಕ್ಷೆ ನಡೆಸಲಾಗಿದೆ. ಟಾಟಾ ಮೋಟಾರ್ಸ್ ಅಭಿವೃದ್ಧಿಪಡಿಸಿರುವ ಹೊಚ್ಚ ಹೊಸ 1.5 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೋಚಾರ್ಜ್ಡ್ (TGDi) ಪೆಟ್ರೋಲ್ ಎಂಜಿನ್ ಹೊಂದಿರುವ ಸಿಯೆರಾ, ಈ ಟ್ರ್ಯಾಕ್‌ನಲ್ಲಿ 222 ಕಿ.ಮೀ. ಗರಿಷ್ಠ ವೇಗವನ್ನು ಮುಟ್ಟಿದೆ. 0 ಯಿಂದ 100 ಕಿ.ಮೀ. ವೇಗವನ್ನು ಕೇವಲ 10 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯ ಇದಕ್ಕಿದೆ.

ಗ್ರಾಹಕರಿಗೆ ಸಿಗೋದು 190 kmph ಮಾತ್ರ!
ಪರೀಕ್ಷಾಾರ್ಥವಾಗಿ 222 ಕಿ.ಮೀ. ವೇಗ ದಾಖಲಿಸಿದ್ದರೂ, ಸಾರ್ವಜನಿಕರಿಗೆ ಮಾರಾಟವಾಗುವ (Production Spec) ಸಿಯೆರಾ ಕಾರುಗಳಲ್ಲಿ ಗರಿಷ್ಠ ವೇಗವನ್ನು ಎಲೆಕ್ಟ್ರಾನಿಕ್ ಆಗಿ 190 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ (Electronically Limited). ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ನಿಮ್ಮ ಸಿಯೆರಾದಲ್ಲಿ ನೀವು 222 ಕಿ.ಮೀ. ವೇಗದಲ್ಲಿ ಹೋಗಲು ಸಾಧ್ಯವಿಲ್ಲ.

ಏನಿದು ಹೈಪರಿಯನ್ (Hyperion) ಎಂಜಿನ್?
ಈ ಎಸ್‌ಯುವಿಯಲ್ಲಿ ಬಳಸಿರುವುದು 1.5 ಲೀಟರ್ ಹೈಪರಿಯನ್ ಟರ್ಬೋ ಪೆಟ್ರೋಲ್ ಎಂಜಿನ್. ಇದು 160 hp ಶಕ್ತಿ ಮತ್ತು 255 Nm ಟಾರ್ಕ್ ಉತ್ಪಾದಿಸುತ್ತದೆ. ‘ಸ್ಪೋರ್ಟ್’ ಮೋಡ್‌ನಲ್ಲಿ ಚಲಿಸುವಾಗ ಈ ಎಂಜಿನ್ ಅದ್ಭುತ ಸಾಮರ್ಥ್ಯ ತೋರಿಸುತ್ತದೆ. ಇದರಲ್ಲಿರುವ ಎಲೆಕ್ಟ್ರಾನಿಕ್ ಆಕ್ಟಿವೇಟೆಡ್ ವೇರಿಯಬಲ್ ಟರ್ಬೋಚಾರ್ಜರ್ ಮತ್ತು ಎಐ (AI) ತಂತ್ರಜ್ಞಾನ ಆಧಾರಿತ ಇಂಟೆಲಿಜೆಂಟ್ ಎಂಜಿನ್ ಕಂಟ್ರೋಲ್ ವ್ಯವಸ್ಥೆ, ಚಾಲನೆಗೆ ಹೊಸ ಅನುಭವ ನೀಡುತ್ತದೆ.

ಮೂರು ಎಂಜಿನ್ ಆಯ್ಕೆಗಳು ಲಭ್ಯ
ಗ್ರಾಹಕರ ಬೇಡಿಕೆಗೆ ತಕ್ಕಂತೆ ಟಾಟಾ ಮೂರು ವಿಭಿನ್ನ ಎಂಜಿನ್ ಆಯ್ಕೆಗಳನ್ನು ನೀಡಿದೆ:

- 1.5L TGDi ಪೆಟ್ರೋಲ್ (Hyperion): ವೇಗ ಮತ್ತು ಥ್ರಿಲ್ ಬಯಸುವವರಿಗಾಗಿ.
- 1.5L ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (Revotron): ನಗರ ಪ್ರದೇಶದಲ್ಲಿ ಹೆಚ್ಚು ಓಡಾಡುವವರಿಗೆ ಮತ್ತು ಮೈಲೇಜ್ ಬಯಸುವವರಿಗೆ ಸೂಕ್ತ.
- 1.5L ಡೀಸೆಲ್ ಎಂಜಿನ್: ಕರ್ವ್ (Curvv) ಕಾರಿನಲ್ಲಿರುವ ಸುಧಾರಿತ ಡೀಸೆಲ್ ಎಂಜಿನ್ ಇದಾಗಿದ್ದು, 116 hp ಮತ್ತು 280 Nm ಟಾರ್ಕ್ ನೀಡುತ್ತದೆ.
ಬೆಲೆ ಎಷ್ಟು?
ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯು ‘ಅಡ್ವೆಂಚರ್+’, ‘ಅಕಾಂಪ್ಲಿಶ್ಡ್’ ಮತ್ತು ‘ಅಕಾಂಪ್ಲಿಶ್ಡ್+’ ವೆರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ. ಇದರ ಆರಂಭಿಕ ಬೆಲೆ 17.99 ಲಕ್ಷ ರೂ. (ಎಕ್ಸ್-ಶೋರೂಂ). ಟಾಪ್ ಎಂಡ್ ಮಾದರಿಯ ಬೆಲೆ 20 ಲಕ್ಷ ರೂ. ಒಳಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಒಪ್ಪೋ ಫೈಂಡ್ X9 ‘ವೆಲ್ವೆಟ್ ರೆಡ್’ ಆವೃತ್ತಿ ಬಿಡುಗಡೆ : ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ಬಣ್ಣದ ಫ್ಲ್ಯಾಗ್‌ಶಿಪ್ ಫೋನ್



















